×
Ad

ಮಂಡ್ಯ ನಾಗಮಂಗಲ ಮೂಲದ ಕೊರೋನ ಸೋಂಕಿತ ಭೇಟಿ: ತೆಕ್ಕಟ್ಟೆ ಪೆಟ್ರೋಲ್ ಬಂಕ್ ಬಂದ್

Update: 2020-04-28 21:13 IST

ಕುಂದಾಪುರ, ಎ.28: ಮುಂಬೈನಿಂದ ಕರ್ಜೂರ ಸಾಗಾಟದ ಲಾರಿಯಲ್ಲಿ ಪ್ರಯಾಣಿಸಿದ್ದ ಮಂಡ್ಯ ಜಿಲ್ಲೆ ನಾಗಮಂಗಲದ ಕೊರೊನಾ ಸೋಂಕಿತ ವ್ಯಕ್ತಿ, ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ ಮಾಡಿರುವುದು ಎ.27ರಂದು ತಡರಾತ್ರಿ ಸಿಸಿಟಿವಿ ಪರಿಶೀಲನೆ ಬಳಿಕ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎ.28ರಂದು ಪೆಟ್ರೋಲ್ ಬಂಕ್‌ನ್ನು ಬಂದ್ ಮಾಡಲಾಗಿದೆ.

ಈ ಸಂಬಂಧ ತೆಕ್ಕಟ್ಟೆಯ ಶಿವಪ್ರಸಾದ್ ಪೆಟ್ರೋಲ್ ಬಂಕ್ ಮಾಲಕ ಸೇರಿ ದಂತೆ ಒಟ್ಟು 11 ಮಂದಿ ಸಿಬ್ಬಂದಿ ಮತ್ತು ಲಾರಿಯನ್ನು ಪರಿಶೀಲನೆ ನಡೆಸಿದ ಸಾಸ್ತಾನ ಟೋಲ್ಗೇಟ್‌ನ ಏಳು ಮಂದಿ ಸಿಬ್ಬಂದಿಯನ್ನು ಉಡುಪಿ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿರುವ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಲಾರಿಯಲ್ಲಿ ಚಾಲಕ ಮತ್ತು ಕ್ಲೀನರ್ ಜೊತೆ ಪ್ರಯಾಣಿಸಿದ ಈ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯನ್ನು ಪರಿಶೀಲಿಸಿದಾಗ ಎ.21ರಂದು ಸಂಜೆ 4:55ಕ್ಕೆ ಶಿರೂರು ಚೆಕ್‌ಪೋಸ್ಟ್ ಮೂಲಕ ಸಾಗಿ ಬಂದ ಈ ಲಾರಿಯು ಸಂಜೆ 6:46ಕ್ಕೆ ತೆಕ್ಕಟ್ಟೆ ಪೆಟ್ರೋಲ್ ಬಂಕಿಗೆ ಬಂದಿತ್ತು. ಅಲ್ಲಿಂದ ತೆರಳಿದ್ದ ಲಾರಿಯು ರಾತ್ರಿ 9:45ರ ಸುಮಾರಿಗೆ ಮತ್ತೆ ವಾಪಾಸ್ ಪೆಟ್ರೋಲ್ ಬಂಕ್ ಆವರಣಕ್ಕೆ ಬಂದು ನಿಲ್ಲಿಸಿರುವುದು ಕಂಡುಬಂದಿದೆ.

ಸೋಂಕಿತ ಸಹಿತ ಅದರಲ್ಲಿದ್ದವರು ಅಲ್ಲಿಯೇ ಊಟ, ಸ್ನಾನ ಮಾಡಿ ಲಾರಿ ಯಲ್ಲಿಯೇ ಮಲಗಿದ್ದರು. ಎ.22ರಂದು ನಸುಕಿನ ವೇಳೆ 3 ಗಂಟೆ ಸುಮಾರಿಗೆ ಲಾರಿ ಅಲ್ಲಿಂದ ಹೊರಟು, 3:38ಕ್ಕೆ ಸಾಸ್ತಾನ ಟೋಲ್‌ಗೇಟ್‌ನಿಂದ ಪಾಸ್ ಆಗಿ ಹೋಗಿದೆ ಎಂದು ಪೊಲೀಸರು ಹಾಗೂ ಆರೋಗ್ಯಾಧಿಕಾರಿಗಳು ನಡೆಸಿದ ಪರಿಶೀಲನೆ ಬಳಿಕ ತಿಳಿದುಬಂದಿದೆ.

ರಾಸಾಯನಿಕ ಸಿಂಪಡಣೆ: ಕೊರೋನ ಸೋಂಕಿತ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಉಡುಪಿ ಜಿಲ್ಲಾಡಳಿತ ನೀಡಿದ ಆದೇಶದಂತೆ ಇಂದು ಬೆಳಿಗ್ಗೆ ತೆಕ್ಕಟ್ಟೆ ಪೆಟ್ರೋಲ್ ಬಂಕ್‌ನ್ನು ಸೀಲ್ ಮಾಡಲಾಗಿದೆ.

ಕೋಟ ಪೊಲೀಸರು ಪೆಟ್ರೋಲ್ ಬಂಕ್ ಎದುರುಗಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಅಲ್ಲಿಗೆ ತೆರಳುವ ದಾರಿಯನ್ನು ಬಂದ್ ಮಾಡಿದರು. ಅಲ್ಲದೆ ಪೊಲೀಸ್ ಬ್ಯಾಂಡ್ ಹಾಕಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬಳಿಕ ಕುಂದಾ ಪುರ ಪುರಸಭೆ ಕಾರ್ಮಿಕರು ಪೆಟ್ರೋಲ್ ಪಂಪ್ ಸುತ್ತ ರಾಸಾಯನಿಕವನ್ನು ಸಿಂಪಡಿ ಸುವ ಕಾರ್ಯ ನಡೆಸಿದರು.

ನಾಗಮಂಗಲದ ವ್ಯಕ್ತಿ ಉಡುಪಿ ಮಾರ್ಗವಾಗಿ ತೆರಳಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಶಿರೂರು ಟೋಲ್‌ಗೇಟ್‌ನಿಂದ ತೆಕ್ಕಟ್ಟೆಯವರೆಗೆ ಸುಮಾರು ಐದು -ಆರು ಪೆಟ್ರೋಲ್ ಬಂಕ್‌ಗಳಿಗೆ ತೆರಳಿ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗಿದೆ. ಅದರಲ್ಲಿ ಮಧ್ಯರಾತ್ರಿ ವೇಳೆ ತೆಕ್ಕಟ್ಟೆಯಲ್ಲಿ ಆತ ಸ್ನಾನ ಮಾಡಿರುವುದು ದೃಢಪಟ್ಟಿತು. ಆತ ಕೇವಲ ಸ್ನಾನ ಮಾಡಿ, ಊಟ ಮಾಡಿ ಹೋಗಿರುವುದರಿಂದ ಯಾರು ಕೂಡ ಆತಂಕ ಪಡುವ ಅಗತ್ಯ ಇಲ್ಲ ಎಂದು ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಸೋಮವಾರ ತಡರಾತ್ರಿ ಪೆಟ್ರೋಲ್ ಬಂಕ್‌ಗೆ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ, ಬೈಂದೂರು ಆಸ್ಪತ್ರೆ ವೈದ್ಯಾಧಿ ಕಾರಿ ಡಾ.ಪ್ರೇಮಾನಂದ, ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಆಶಾ ಕಾರ್ಯ ಕರ್ತೆಯರು ಪೆಟ್ರೋಲ್ ಬಂಕ್ ಆಸುಪಾಸಿನ ಮನೆಗಳಿಗೆ ತೆಳಿ ಆರೋಗ್ಯ ವಿಚಾರಣೆ ನಡೆಸಿದರು.

ಆರಂಭದ ಸುದ್ದಿಯಿಂದ ಮರವಂತೆಯಲ್ಲಿ ಆತಂಕ!

ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯಂತೆ ಆತ ಶಿರೂರು ಚೆಕ್‌ಪೋಸ್ಟ್ ನಿಂದ ಸಾಸ್ತಾನ ಚೆಕ್‌ಪೋಸ್ಟ್ ಮಧ್ಯದಲ್ಲಿರುವ ಪೆಟ್ರೋಲ್ ಬಂಕ್‌ವೊಂದರಲ್ಲಿ ಪೆಟ್ರೋಲ್ ಹಾಕಿ, ಅಲ್ಲಿಯೇ ಸ್ನಾನ ಮಾಡಿರುವುದಾಗಿ ಮಾಹಿತಿ ಬಂದಿತ್ತು. ಅದರಂತೆ ಈ ಮಧ್ಯೆ ಬರುವ ಸುಮಾರು ಐದಾರು ಪೆಟ್ರೋಲ್ ಬಂಕ್ಗಳನ್ನು ಪೊಲೀಸರು ತಡರಾತ್ರಿಯವರೆಗೆ ತಪಾಸಣೆ ನಡೆಸಿದರು.

ಆರಂಭದಲ್ಲಿ ಮರವಂತೆ ಪೆಟ್ರೋಲ್ ಬಂಕ್ ಎಂಬುದಾಗಿ ಹೇಳಲಾಗಿತ್ತು. ಆದರೆ ತಡರಾತ್ರಿ 12:30ರ ಸುಮಾರಿಗೆ ತೆಕ್ಕಟ್ಟೆಯಲ್ಲಿರುವ ಪೆಟ್ರೋಲ್ ಬಂಕ್ ಎಂಬುದು ಅಲ್ಲಿನ ಸಿಸಿಟಿವಿ ಮೂಲಕ ದೃಢಪಟ್ಟಿತ್ತು. ಈ ನಡುವೆ ಸೋಂಕಿತ ವ್ಯಕ್ತಿ ಮರವಂತೆ ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ ಮಾಡಿರುವುದಾಗಿ ಸುದ್ದಿ ಹಬ್ಬಿ ರುವ ಹಿನ್ನೆಲೆಯಲ್ಲಿ ಸ್ಥಳೀಯ ಪರಿಸರದಲ್ಲಿ ಆತಂಕ ಸೃಷ್ಠಿಯಾಗಿತ್ತು. ಆದರೆ ಈ ಬಗ್ಗೆ ಯಾರು ಕೂಡ ಆತಂಕ ಪಡುವ ಅಗತ್ಯ ಇಲ್ಲ. ಈ ಪೆಟ್ರೋಲ್ ಬಂಕ್‌ಗೆ ಸೋಂಕಿತ ವ್ಯಕ್ತಿ ಬಂದಿಲ್ಲ ಎಂದು ಗಂಗೊಳ್ಳಿ ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News