‘ಉತ್ತರ ಪ್ರದೇಶದಲ್ಲಿ 15 ದಿನಗಳಲ್ಲಿ 100 ಜನರ ಹತ್ಯೆ’: ಸಾಧುಗಳ ಹತ್ಯೆ ಬಗ್ಗೆ ಪ್ರಿಯಾಂಕಾ ಗಾಂಧಿ ಆಕ್ರೋಶ

Update: 2020-04-28 15:56 GMT

ಹೊಸದಿಲ್ಲಿ: ದೇವಸ್ಥಾನವೊಂದರಲ್ಲಿ ಇಬ್ಬರು ಸಾಧುಗಳನ್ನು ಭೀಕರವಾಗಿ ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿ ಆದಿತ್ಯನಾಥ್ ಸರಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ಆಕ್ರೋಶ, ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಟೀಕಿಸಿರುವ ಅವರು, ಘಟನೆಯ ಬಗ್ಗೆ ನಿಷ್ಪಕ್ಷಪಾತದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. “ಎಪ್ರಿಲ್ ತಿಂಗಳ ಆರಂಭದ 15 ದಿನದಲ್ಲೇ ಉತ್ತರಪ್ರದೇಶದಲ್ಲಿ 100ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಗಿದೆ. ಇಂತಹ ಹೇಯ ಕೃತ್ಯದ ವಿಷಯವನ್ನೂ ರಾಜಕೀಯಗೊಳಿಸಲು ಪ್ರಯತ್ನಿಸದೆ ಕೂಲಂಕುಷ ವಿಚಾರಣೆ ನಡೆಸಬೇಕು” ಎಂದವರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ದಿನೇ ದಿನೇ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು. ಸರಕಾರವು ರಾಜ್ಯದಲ್ಲಿ ಬ್ರಾಹ್ಮಣರ ಹತ್ಯೆಗೆ ಪ್ರಚೋದನೆ ನೀಡಿ ಬಳಿಕ ಅಂತಹ ಪ್ರಕರಣವನ್ನು ಮುಚ್ಚಿ ಹಾಕುತ್ತಿದೆ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ್ ಆರೋಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರೂ ಹತ್ಯೆಯನ್ನು ಖಂಡಿಸಿದ್ದು, ಕೂಲಂಕುಷ ತನಿಖೆಗೆ ಆಗ್ರಹಿಸಿದ್ದಾರೆ.

ಆದಿತ್ಯನಾಥ್‌ ಗೆ ಕರೆ ಮಾಡಿದ ಉದ್ಧವ್ ಠಾಕ್ರೆ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಆದಿತ್ಯನಾಥ್‌ಗೆ ಕರೆ ಮಾಡಿದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಇಂತಹ ಘೋರ ಕೃತ್ಯಗಳು ನಡೆದಾಗ ಅದನ್ನು ರಾಜಕೀಯಗೊಳಿಸಬಾರದು ಎಂದವರು ಹೇಳಿದ್ದಾರೆ.

ಮಹಾರಾಷ್ಟ್ರದ ಪಾಲ್ಘಾರ್‌ ನಲ್ಲಿ ಇಬ್ಬರು ಸಾಧುಗಳನ್ನು ಗುಂಪೊಂದು ಥಳಿಸಿ ಹತ್ಯೆ ಮಾಡಿದ ಪ್ರಕರಣದ ಬೆನ್ನಲ್ಲೇ ಉದ್ಧವ್ ಠಾಕ್ರೆಗೆ ಕರೆ ಮಾಡಿದ್ದ ಆದಿತ್ಯನಾಥ್, ಈ ಪ್ರಕರಣದ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಬಳಿಕ ಸುದ್ದಿಗೋಷ್ಟಿ ನಡೆಸಿ, ತಾನು ಉದ್ಧವ್ ಠಾಕ್ರೆ ಜತೆ ದೂರವಾಣಿಯಲ್ಲಿ ಮಾತನಾಡಿ, ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದೇನೆ ಎಂದಿದ್ದರು.

ಇದು ಕೋಮುಗಲಭೆಗೆ ಸಂಬಂಧಿಸಿದ ಪ್ರಕರಣವಲ್ಲ ಎಂದು ಮಹಾರಾಷ್ಟ್ರ ಸರಕಾರ ಸ್ಪಷ್ಟನೆ ನೀಡಿದ್ದರೂ ಹಲವು ಬಿಜೆಪಿ ಮುಖಂಡರು ಈ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಠಾಕ್ರೆಗೆ ಕರೆ ಮಾಡಿ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದರು.

ಇದೀಗ ಉತ್ತರಪ್ರದೇಶದ ಬುಲಂದ್ ‌ಶಹರ್ ‌ನಲ್ಲಿ ಇಂತಹುದೇ ಕೃತ್ಯ ನಡೆದಾಗ ಮಹಾರಾಷ್ಟ್ರದ ಮುಖ್ಯಮಂತ್ರಿ ಠಾಕ್ರೆ ಆದಿತ್ಯನಾಥ್‌ ಗೆ ಕರೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಅಲ್ಲದೆ ಬಳಿಕ ಸುದ್ದಿಗೋಷ್ಟಿ ನಡೆಸಿ, ಆದಿತ್ಯನಾಥ್‌ಗೆ ಕರೆ ಮಾಡಿದ ವಿಷಯವನ್ನು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News