ಗಾಳಿ ಕಡಿಮೆ ಇರುವ ಸ್ಥಳಗಳಲ್ಲಿ ತುಂಬಾ ಸಮಯ ತೇಲುವ ಕೊರೋನ: ಅಧ್ಯಯನ ವರದಿ
ವಾಶಿಂಗ್ಟನ್, ಎ. 28: ಜನಭರಿತ ಸ್ಥಳಗಳು ಮತ್ತು ಗಾಳಿಯಾಡಲು ವ್ಯವಸ್ಥೆಯಿಲ್ಲದ ಕೋಣೆಗಳಲ್ಲಿ ನೂತನ-ಕೊರೋನ ವೈರಸ್ ಗಾಳಿಯಲ್ಲಿ ಒಂದೇ ಸ್ಥಳದಲ್ಲಿ ನೆಲೆನಿಂತಂತೆ ಕಂಡುಬಂದಿದೆ ಎಂದು ಸಂಶೋಧಕರು ಅಧ್ಯಯನವೊಂದರಲ್ಲಿ ಪತ್ತೆಹಚ್ಚಿದ್ದಾರೆ. ಆ ಮೂಲಕ, ‘ಏರೋಸೋಲ್’ ಎಂಬುದಾಗಿ ಕರೆಯಲ್ಪಡುವ ಗಾಳಿಯಲ್ಲಿರುವ ಸಣ್ಣ ಕಣಗಳ ಮೂಲಕ ಕೋವಿಡ್-19 ಹರಡಬಹುದು ಎಂಬ ಅಭಿಪ್ರಾಯವನ್ನು ಇದು ಸಮರ್ಥಿಸುತ್ತದೆ.
ಚೀನಾದ ವುಹಾನ್ ನಗರದಲ್ಲಿರುವ ಎರಡು ಆಸ್ಪತ್ರೆಗಳ ಶೌಚಾಲಯಗಳು, ದೊಡ್ಡ ಸಂಖ್ಯೆಯಲ್ಲಿ ಜನರು ವಾಸಿಸುವ ಒಳಾಂಗಣ ಸ್ಥಳವೊಂದರಲ್ಲಿ ಹಾಗೂ ವೈದ್ಯಕೀಯ ಸಿಬ್ಬಂದಿ ತಮ್ಮ ರಕ್ಷಣಾ ದಿರಿಸುಗಳನ್ನು ತೆಗೆಯುವ ಕೋಣೆಗ ವಾಯುವಿನಲ್ಲಿ ವೈರಸ್‌ನ ವಂಶವಾಹಿಗೆ ಸಂಬಂಧಿಸಿದ ಅತಿ ಸಣ್ಣ ಪದಾರ್ಥಗಳು ತೇಲುತ್ತಿರುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಆದರೆ, ‘ನೇಚರ್ ರಿಸರ್ಚ್’ ಪತ್ರಿಕೆಯಲ್ಲಿ ಸೋಮವಾರ ಪ್ರಕಟಗೊಂಡಿರುವ ಅಧ್ಯಯನ ವರದಿಯು, ಗಾಳಿಯಲ್ಲಿ ತೇಲಾಡುತ್ತಿರುವ ಈ ಕಣಗಳು ಸೋಂಕು ಉಂಟು ಮಾಡುತ್ತವೆಯೇ ಎನ್ನುವುದನ್ನು ಹೇಳಿಲ್ಲ.
ಗಾಳಿಯ ಮೂಲಕ ಹರಡುವುದೇ?
ನೂತನ-ಕೊರೋನ ವೈರಸ್ ಗಾಳಿಯ ಮೂಲಕ ಹರಡಬಹುದೇ ಎನ್ನುವ ಪ್ರಶ್ನೆಯು ಈಗಲೂ ಚರ್ಚಾಸ್ಪದವಾಗಿದೆ. ಈ ಸಾಧ್ಯತೆಯು ನಿರ್ದಿಷ್ಟ ಸನ್ನಿವೇಶಗಳಿಗೆ ಸೀಮಿತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಚೀನಾದಲ್ಲಿ ವರದಿಯಾಗಿರುವ 75,000ಕ್ಕೂ ಅಧಿಕ ಸೋಂಕು ಪ್ರಕರಣಗಳನ್ನು ಉಲ್ಲೇಖಿಸಿರುವ ಅದು, ಈ ಪ್ರಕರಣಗಳ ವಿಶ್ಲೇಷಣೆಯಲ್ಲಿ ಗಾಳಿಯ ಮೂಲಕ ಸೋಂಕು ತಗಲಿರುವ ಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಿದೆ.