×
Ad

ಆಶಾ ಕಾರ್ಯಕರ್ತೆಯರಿಗೆ ಡಿಸಿಸಿ ಬ್ಯಾಂಕ್‍ನಿಂದ ವಿಶೇಷ ಪ್ರೋತ್ಸಾಹಧನ: ಡಾ. ರಾಜೇಂದ್ರಕುಮಾರ್

Update: 2020-04-28 22:14 IST

ಮೂಡುಬಿದಿರೆ : ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ  ದ.ಕ., ಉಡುಪಿ ಜಿಲ್ಲಾ ಆಶಾ ಕಾರ್ಯಕರ್ತೆಯರು ಹಾಗೂ ನವೋದಯ ಸ್ವಸಹಾಯ ಗುಂಪುಗಳ ಪ್ರೇರಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಸಮಾಜ ಮಂದಿರದಲ್ಲಿ ಮಂಗಳವಾರ ನಡೆಯಿತು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ  ಡಾ. ಎಂ. ಎನ್. ರಾಜೇಂದ್ರ ಕುಮಾರ್ ಕ್ಷೇತ್ರದ ಒಟ್ಟು  205 ಮಂದಿ ಆಶಾ ಕಾರ್ಯಕರ್ತೆ ಯರು, ನವೋದಯದ ಪ್ರೇರಕರು, ದಾದಿಯರು ಹಾಗೂ ಪತ್ರಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ ಡಿಸಿಸಿ ಬ್ಯಾಂಕ್‍ನಿಂದ ರೂ. ಒಂದು ಸಾವಿರ ಜಮಾ ಮಾಡಲಾಗುವುದು' ಎಂದು ಪ್ರಕಟಿಸಿದರು.

'ಎಲ್ಲೆಡೆ ಕಾಡುತ್ತಿರುವ ಕೊರೊನಾ ವಿರುದ್ಧ  ನಡೆಯುತ್ತಿರುವ  ವೈದ್ಯಕೀಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಆಶಾ ಕಾರ್ಯ ಕರ್ತೆಯರ ಕರ್ತವ್ಯ ಪಾಲನೆಗೆ ಯಾರೋ ಪ್ರತಿರೋಧ ವ್ಯಕ್ತಪಡಿಸಲಿ, ಜವಾಬ್ದಾರಿಯುತ ನಾಗರಿಕರೆಲ್ಲ ಅದನ್ನು ಖಂಡಿಸಬೇಕಾಗಿದೆ.  ಇಂಥ ಪುಂಡಾಟಿಕೆಗೆ ತಡೆಯೊಡ್ಡಲು  ಜಾರಿಗೊಳಿಸಲಾದ ಸುಗ್ರೀವಾಜ್ಞೆ ಸ್ವಾಗತಾರ್ಹ ಕ್ರಮವಾಗಿದೆ. ಆಶಾ ಕಾರ್ಯಕರ್ತೆಯರಿಗೆ ಎಲ್ಲ ರೀತಿಯ ಬೆಂಬಲ ನೀಡಬೇಕಾಗಿದೆ' ಎಂದವರು ಹೇಳಿದರು. 

ಮಾಜಿ ಸಚಿವ ಕೆ. ಅಭಯಚಂದ್ರ, ತಹಶೀಲ್ದಾರ್ ಅನಿತಾಲಕ್ಷ್ಮೀ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಶಶಿಕಲಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಎಸ್. ಕೋಟ್ಯಾನ್, ವಿವಿಧ ವ್ಯ.ಸೇ.ಸಹಕಾರಿ ಸಂಘಗಳ ಅಧ್ಯಕ್ಷರಾದ ಜೋಕಿಂ ಕೊರೆಯ (ಕಲ್ಲಮುಂಡ್ಕೂರು),  ಹರಿಪ್ರಸಾದ್ ಶೆಟ್ಟಿ (ಪುತ್ತಿಗೆ), ಪದ್ಮಪ್ರಸಾದ್ ಜೈನ್   (ಹೊಸಬೆಟ್ಟು), ಅಶ್ವಿನ್ ಜೊಸ್ಸಿ ಪಿರೇರಾ (ಕರಿಂಜೆ),  ಪ್ರವೀಣ್‍ಕುಮಾರ್ (ಕಲ್ಲಬೆಟ್ಟು) ಮೊದಲಾದ ಗಣ್ಯರು ಭಾಗವಹಿಸಿದ್ದರು.  ಮೋಹನದಾಸ ಪ್ರಭು ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News