ಬಡ ದೇಶಗಳ ಮಕ್ಕಳ ಮೇಲೆ ಕೊರೋನ ಪ್ರಭಾವ ತೀವ್ರ: ವಿಶ್ವ ಆರೋಗ್ಯ ಸಂಸ್ಥೆ

Update: 2020-04-28 17:38 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಎ. 28: ಕೊರೋನವೈರಸ್ ಸಾಂಕ್ರಾಮಿಕದ ಕತೆ ಮುಗಿದಿಲ್ಲ, ಅದು ಸಾಮಾನ್ಯ ಆರೋಗ್ಯ ಸೇವೆಗಳನ್ನು, ಅದರಲ್ಲೂ ಮುಖ್ಯವಾಗಿ ಅತಿ ಬಡ ದೇಶಗಳ ಮಕ್ಕಳ ಪ್ರಾಣರಕ್ಷಕ ರೋಗನಿರೋಧಕ ಶಕ್ತಿಯನ್ನು ಈಗಲೂ ನಾಶಪಡಿಸುತ್ತಿದೆ ಎಂದು ವಿಶ್ವ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಸೋಮವಾರ ಹೇಳಿದ್ದಾರೆ.

ಕೆಲವು ಶ್ರೀಮಂತ ದೇಶಗಳಲ್ಲಿ ರೋಗದ ತೀವ್ರತೆ ಕಡಿಮೆಯಾಗಿದೆಯಾದರೂ, ಆಫ್ರಿಕ, ಪೂರ್ವ ಯುರೋಪ್, ಲ್ಯಾಟಿನ್ ಅಮೆರಿಕ ಮತ್ತು ಕೆಲವು ಏಶ್ಯನ್ ದೇಶಗಳಲ್ಲಿ ಹೆಚ್ಚುತ್ತಿರುವ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘‘ನಮ್ಮ ಮುಂದಿರುವ ದಾರಿ ಸುದೀರ್ಘವಾಗಿದೆ ಹಾಗೂ ನಾವು ಮಾಡಬೇಕಾಗಿರುವುದು ತುಂಬಾ ಇದೆ’’ ಎಂದು ಜಿನೀವದಲ್ಲಿ ವೀಡಿಯೊ ಲಿಂಕ್ ಮೂಲಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೇಬ್ರಿಯೇಸಸ್ ಹೇಳಿದರು. ಸರಿಯಾದ ವಿಧಾನಗಳ ಮೂಲಕ ಎರಡನೇ ಹಂತದ ಸೋಂಕು ಅಲೆಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿರುವ ಕೊರೋನವೈರಸ್‌ಗೆ ಈವರೆಗೆ 2,05,948 ಮಂದಿ ಬಲಿಯಾಗಿದ್ದಾರೆ ಹಾಗೂ 30 ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ.

‘ಜಗತ್ತು ನಮ್ಮ ಮಾತನ್ನು ಕೇಳಲಿಲ್ಲ: ಗೇಬ್ರಿಯೇಸಸ್

ನೋವೆಲ್-ಕೊರೋನವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಆರಂಭದಲ್ಲೇ ಗರಿಷ್ಠ ಮಟ್ಟದ ಎಚ್ಚರಿಕೆಯನ್ನು ನೀಡಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಸೋಮವಾರ ಹೇಳಿದ್ದಾರೆ. ಆದರೆ, ಎಲ್ಲ ದೇಶಗಳು ಅದರ ಸಲಹೆಯನ್ನು ಪರಿಗಣಿಸಲಿಲ್ಲ ಎಂದು ಅವರು ವಿಷಾದಿಸಿದರು.

ಕೋವಿಡ್-19 ಸಾಂಕ್ರಾಮಿಕ ಸ್ಫೋಟವು ‘ಅಂತರ್‌ರಾಷ್ಟ್ರೀಯ ಮಟ್ಟದ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ’ಗೆ ಕಾರಣವಾಗುತ್ತದೆ ಎಂಬುದಾಗಿ ಸಂಸ್ಥೆಯು ಜನವರಿ 30ರಂದೇ ಎಚ್ಚರಿಸಿತ್ತು ಎಂದು ಅವರು ಹೇಳಿದರು. ಆ ವೇಳೆಗೆ, ಚೀನಾದ ಹೊರಗೆ ಯಾವುದೇ ಸಾವು ಸಂಭವಿಸಿರಲಿಲ್ಲ ಹಾಗೂ ಕೇವಲ 82 ಸೋಂಕುಗಳು ವರದಿಯಾಗಿದ್ದವು.

‘‘ಆಗ ಜಗತ್ತು ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯನ್ನು ಜಾಗರೂಕತೆಯಿಂದ ಆಲಿಸಬೇಕಾಗಿತ್ತು’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News