ಆ್ಯಕ್ಸಿಸ್ ಬ್ಯಾಂಕಿಗೆ 1388 ಕೋಟಿ ರೂ. ನಷ್ಟ: ಕಾರಣ ಏನು ಗೊತ್ತೇ ?
Update: 2020-04-29 09:34 IST
ಹೊಸದಿಲ್ಲಿ: ಆ್ಯಕ್ಸಿಸ್ ಬ್ಯಾಂಕ್ 2020ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ 1388 ಕೋಟಿ ರೂಪಾಯಿಗಳ ನಷ್ಟವನ್ನು ದಾಖಲಿಸಿ ಅಚ್ಚರಿ ಮೂಡಿಸಿದೆ. ಕೋವಿಡ್-19 ಲಾಕ್‌ಡೌನ್ ಹಾಗೂ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಸಾಲ ಕ್ಷೇತ್ರದ ಸಂಭಾವ್ಯ ನಷ್ಟಕ್ಕೆ ಹೆಚ್ಚುವರಿ ಹಣವನ್ನು ಮೀಸಲಿಟ್ಟಿರುವ ಹಿನ್ನೆಲೆಯಲ್ಲಿ ನಷ್ಟ ಕಂಡುಬಂದಿದೆ.
ಭಾರತದ ಮೂರನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್, 2020ರ ಮಾರ್ಚ್‌ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ 1387.7 ಕೋಟಿ ರೂ. ನಷ್ಟವನ್ನು ತೋರಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1505 ಕೋಟಿ ರೂ. ಲಾಭ ಪ್ರಕಟಿಸಿತ್ತು.
ಈ ತ್ರೈಮಾಸಿಕದಲ್ಲಿ ಬ್ಯಾಂಕ್ ಕೋವಿಡ್ ಸಂಬಂಧಿತ ನಷ್ಟಕ್ಕಾಗಿ 3000 ಕೋಟಿ ರೂ. ಸೇರಿದಂತೆ ಒಟ್ಟು 7730 ಕೋಟಿ ರೂ. ಮೀಸಲಿಟ್ಟಿದೆ ಎಂದು ನಿಯಂತ್ರಣಾತ್ಮಕ ಸಂಸ್ಥೆಗೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿದೆ.
ಆಸ್ತಿ ಗುಣಮಟ್ಟ ಕ್ಷೇತ್ರದಲ್ಲಿ ಎನ್‌ಪಿಎ ಪ್ರಮಾಣ ಈ ತ್ರೈಮಾಸಿಕದಲ್ಲಿ 1.56%ಕ್ಕೆ ಇಳಿದಿದೆ.