ಕೊರೋನ ವೈರಸ್: ಅಮೆರಿಕದಲ್ಲಿ 10 ಲಕ್ಷ ಮಂದಿಗೆ ಸೋಂಕು
ವಾಷಿಂಗ್ಟನ್ : ಅಮೆರಿಕದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಮಂಗಳವಾರ 10 ಲಕ್ಷದ ಗಡಿ ದಾಟಿದೆ. ಈ ಮಧ್ಯೆ ಸ್ಪೈನ್, ರಷ್ಯಾ ಹಾಗೂ ನೈಜೀರಿಯಾ ಸೇರಿದಂತೆ ಕೆಲ ದೇಶಗಳು, ಜನಜೀವನವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಕೆಲ ವಹಿವಾಟುಗಳ ಪುನರಾರಂಭಕ್ಕೆ ನಿರ್ಧರಿಸಿವೆ.
ಲಾಕ್‌ಡೌನ್ ಭಾಗಶಃ ತೆರವುಗೊಳಿಸುವುದರಿಂದ ಹೊಸದಾಗಿ ಸಾಂಕ್ರಾಮಿಕ ಹರಡುವ ಸಾಧ್ಯತೆ ಇದ್ದರೂ, ಆರ್ಥಿಕ ವಿನಾಶವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದು ಅನಿವಾರ್ಯ ಎನ್ನಲಾಗಿದೆ.
ಅಮೆರಿಕದಲ್ಲಿ ಈಗಾಗಲೇ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದು, 58,365 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದು ಅಮೆರಿಕಕ್ಕೆ ವಿಯೇಟ್ನಾಂ ಯುದ್ಧದಲ್ಲಿ ಆದ ಜೀವ ಹಾನಿಗಿಂತಲೂ ಅಧಿಕ.
ಕೆಲ ದೇಶಗಳಲ್ಲಿ ಕೊರೋನ ಪೀಡಿತರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ತೆರವುಗೊಳಿಸಲು ಸರ್ಕಾರಗಳು ಮುಂದಾಗಿವೆ. ಫ್ರಾನ್ಸ್‌ನಲ್ಲಿ ಮುಂದಿನ ತಿಂಗಳು ಅಂಗಡಿ ಮುಂಗಟ್ಟುಗಳು, ಮಾರುಕಟ್ಟೆಗಳು ಮತ್ತು ಶಾಲೆಗಳು ಪುನರರಾರಂಭವಾಗಲಿವೆ ಎಂದು ಸರ್ಕಾರ ಪ್ರಕಟಿಸಿದೆ. ಸಾರ್ವಜನಿಕ ಸಾರಿಗೆಯಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ಹಲವು ವಾರಗಳ ಕಾಲ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಮುಂದುವರಿಯಲಿದೆ.
ಮುಂದಿನ ಎರಡು ತಿಂಗಳಲ್ಲಿ ನಿಧಾನವಾಗಿ ನಿರ್ಬಂಧ ಸಡಿಲಿಸಲಾಗುವುದು ಎಂದು ಸ್ಪೈನ್ ಸ್ಪಷ್ಟಪಡಿಸಿದೆ. ಇಟೆಲಿಯಲ್ಲಿ ಮುಂದಿನ ವಾರದಿಂದ ನಿರ್ಬಂಧ ಸಡಿಲಿಕೆಯಾಗಲಿದ್ದು, ಮಾಸ್ಕ್ ಧರಿಸುವುದು ಕಡ್ಡಾಯ. ಅಪ್ಪುಗೆ ಹಾಗೂ ಹಸ್ತಲಾಘವಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.