ಉಡುಪಿ ಜಿಲ್ಲೆಗೆ ಹಸಿರು ವಲಯದ ರಿಯಾಯಿತಿ: ಚುರುಕುಗೊಂಡ ವಾಣಿಜ್ಯ ಚಟುವಟಿಕೆ
ಉಡುಪಿ, ಎ.29: ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಹಸಿರು ವಲಯದ ನಿರೀಕ್ಷೆ ಯೊಂದಿಗೆ ಇಂದಿನಿಂದ ಕೆಲವೊಂದು ರಿಯಾಯಿತಿಗಳನ್ನು ನೀಡಿದ ಪರಿಣಾಮ ಜಿಲ್ಲೆಯಾದ್ಯಂತ ವಾಣಿಜ್ಯ ಚಟುವಟಿಕೆಗಳು ಚುರುಕುಗೊಂಡವು. ಈ ಮೂಲಕ ಜಿಲ್ಲೆಯ ಜನಜೀವನ ಸಹಜದತ್ತ ಮರಳುತ್ತಿರುವುದು ಕಂಡುಬಂತು.
ಇಂದು ಬೆಳಗ್ಗೆಯಿಂದಲೇ ಉಡುಪಿ ನಗರ, ಕಾಪು, ಪಡುಬಿದ್ರೆ, ಕುಂದಾಪುರ, ಬ್ರಹ್ಮಾವರ, ಕಾರ್ಕಳ, ಬೈಂದೂರು ಸೇರಿದಂತೆ ಜಿಲ್ಲೆಯ ಪ್ರಮುಖ ಪೇಟೆಗಳಲ್ಲಿ ಜನ ಹಾಗೂ ವಾಹನ ಸಂದಣಿ ಹೆಚ್ಚಾಗಿದ್ದವು. ಜಿಲ್ಲೆ ಯಲ್ಲಿ ಕೆಲವೊಂದು ನಿರ್ಬಂಧಗಳ ಸಡಿಲಿಕೆಯಿಂದ ರಾಷ್ಟ್ರೀಯ ಹೆದ್ದಾರಿ ಸಹಿತ ಜಿಲ್ಲೆಯ ಎಲ್ಲ ರಸ್ತೆಗಳಲ್ಲಿಯೂ ವಾಹನ ಸಂಚಾರ ಹಿಂದಿಗಿಂತ ಹೆಚ್ಚು ಕಂಡು ಬಂತು. ರಿಕ್ಷಾ, ಕಾರು, ಲಾರಿ, ಟೆಂಪೋ, ದ್ವಿಚಕ್ರ ವಾಹನಗಳ ಓಡಾಟ ಸಾಮಾನ್ಯ ದಿನಗಳಂತೆ ಇದ್ದವು.
ಈವರೆಗೆ ದಿನಸಿ, ತರಕಾರಿ, ಬೇಕರಿ ಅಂಗಡಿಗಳು ಮಾತ್ರ ತೆರೆಯಲು ಅವಕಾಶ ಇದಿದ್ದರೆ, ಇಂದಿನಿಂದ ಕೆಲವೊಂದು ಸಣ್ಣಪುಟ್ಟ ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ಜ್ಯೂಸ್, ಫ್ಯಾನ್ಸಿ ಅಂಗಡಿಗಳು, ಕಟ್ಟಡ ಕಾಮಗಾರಿಗೆ ಪೂರಕ ಸಾಮಗ್ರಿಗಳ ಹಾರ್ಡ್‌ವೇರ್, ಸಿಮೇಂಟ್, ಸಿರಮಿಕ್ಸ್ ಅಂಗಡಿಗಳು, ಗ್ಯಾರೇಜ್, ಪಂಚರ್ ಮತ್ತು ಟಯರ್ ಅಂಗಡಿಗಳು ವ್ಯಾಪಾರವನ್ನು ಆರಂಭಿಸಿದವು. ಆದರೆ ಈ ಅಂಗಡಿಗಳಲ್ಲಿ ವ್ಯಾಪಾರ ಮಾತ್ರ ತೀರಾ ಕಡಿಮೆ ಯಾಗಿರುವುದು ಕಂಡುಬಂತು. ಬೆಳಗ್ಗೆ 11ರ ನಂತರ ಈ ಎಲ್ಲ ಅಂಗಡಿ ಗಳನ್ನು ಬಂದ್ ಮಾಡಲಾಯಿತು.
ಉಡುಪಿ ನಗರದ ಪ್ರಮುಖ ರಸ್ತೆಗಳು ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿದ್ದವು. ಕೆಲವು ಕಡೆಗಳಲ್ಲಿ ಸುರಕ್ಷಿತ ಅಂತರವನ್ನು ಗಾಳಿಗೆ ತೂರ ಲಾಗಿತ್ತು. ಹಲವು ಮಂದಿ ಮಾಸ್ಕ್ ಹಾಕದೆ ತಿರುಗುತ್ತಿರುವುದು ಕೂಡ ಕಂಡುಬಂತು. ಈ ಮಧ್ಯೆ ಎಲ್ಲ ಕಡೆ ಪೊಲೀಸರು ಗಸ್ತು ತಿರುಗುತ್ತಿದ್ದು, ನಗರದ ಕಲ್ಸಂಕದಲ್ಲಿ ವಾಹನ ತಪಾಸಣೆಯನ್ನು ನಡೆಸುತ್ತಿದ್ದರು.
ಆದರೆ ಬೃಹತ್ ಬಟ್ಟೆ ಅಂಗಡಿಗಳು, ಚಪ್ಪಲ್ ಅಂಗಡಿಗಳು, ಎಲೆಕ್ಟ್ರಾನಿಕ್ಸ್ ಶಾಪ್‌ಗಳು, ಮಾಲ್‌ಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಬಸ್ ಸಂಚಾರ ಇಲ್ಲದ ಪರಿಣಾಮ ಸಿಟಿ ಹಾಗೂ ಸರ್ವಿಸ್ ಬಸ್ ನಿಲ್ದಾಣಗಳು ಎಂದಿನಂತೆ ಬೀಕೋ ಎನ್ನುತ್ತಿದ್ದವು.