×
Ad

ಅಲೆವೂರು : ಕೊಡಂಗಳ ಹೊಳೆ ಬದಿ ಪಿಪಿಇ ಕಿಟ್ ಪತ್ತೆ ; ಪೊಲೀಸರಿಂದ ತನಿಖೆ

Update: 2020-04-29 11:53 IST

ಉಡುಪಿ, ಎ. 29: ಕೋವಿಡ್ -19 ಚಿಕಿತ್ಸೆಗಾಗಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಬಳಸುವ ಪಿಪಿಇ (ಸುರಕ್ಷತಾ ಪರಿಕರ) ಕಿಟ್‌ವೊಂದು ಅಲೆವೂರು ಗ್ರಾಪಂ ವ್ಯಾಪ್ತಿಯ ಕೊಡಂಗಳ ಎಂಬಲ್ಲಿ ಎ.28ರಂದು ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಗ್ರಾಪಂ ಪಿಡಿಒ ನೀಡಿದ ಮಾಹಿತಿಯಂತೆ ಮಣಿಪಾಲ ಪೊಲೀಸರು ಇಂದು ಬೆಳಗ್ಗೆ ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ.

ಎ.27ರಂದು ಸಂಜೆ ವೇಳೆ ಕೊಡಂಗಳ ಎಂಬಲ್ಲಿರುವ ಕೊಡಂಗಳ ಹೊಳೆಯ ಸಮೀಪ ಬಳಸಿ ಎಸೆದಿದ್ದರೆನ್ನಲಾದ ಪಿಪಿಇ ಕಿಟ್ ಮರುದಿನ ಬೆಳಗ್ಗೆ ಸ್ಥಳೀಯರ ಗಮನಕ್ಕೆ ಬಂತ್ತೆನ್ನಲಾಗಿದೆ. ಈ ಕುರಿತು ಸ್ಥಳೀಯರು ಆಶಾ ಕಾರ್ಯಕರ್ತೆಗೆ ಮಾಹಿತಿ ನೀಡಿದರು. ಅವರು ಇದನ್ನು ಮಣಿಪಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಗಮನಕ್ಕೆ ತಂದಿದ್ದರು.

ನಂತರ ಮಣಿಪುರ ಹಾಗೂ ಅಲೆವೂರು ಗ್ರಾಪಂನ ಪಿಡಿಒಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಈ ಸ್ಥಳ ಅಲೆವೂರು ಗ್ರಾಪಂ ವ್ಯಾಪ್ತಿಗೆ ಬರುವುದರಿಂದ ಇಲ್ಲಿನ ಪಿಡಿಒ ಈ ಬಗ್ಗೆ ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದರು. ಈ ಮಧ್ಯೆ ಈ ಕಿಟ್ ಗಾಳಿಯಿಂದಾಗಿ ಹೊಳೆಗೆ ಬಿದ್ದಿದ್ದು, ಈ ಹೊಳೆಯ ನೀರನ್ನು ಹಲವು ಮಂದಿ ಬಳಸಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಥಳೀಯರು ತೀವ್ರ ಆತಂಕಕಕ್ಕೆ ಒಳಗಾಗಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ, ಈ ಬಗ್ಗೆ ಕೂಡಲೇ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಮಣಿಪಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

‘ಈ ಕಿಟ್ ಪತ್ತೆಯಾಗಿರುವುದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಆದುದರಿಂದ ಇದು ಇಲ್ಲಿಗೆ ಹೇಗೆ ಬಂತು, ಯಾರು ಎಸೆದಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಮಣಿಪಾಲ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಈ ಸಂಬಂಧ ಸ್ಥಳೀಯ ಸಿಸಿಟಿವಿಗಳನ್ನು ಕೂಡ ಪರಿಶೀಲನೆ ನಡೆಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News