ಕೋವಿಡ್-19ಗೆ ಲಸಿಕೆ ದೊರೆಯುವವರೆಗೂ ಜಾಗೃತೆ ವಹಿಸಿ : ನ್ಯಾ. ಸಿ.ಎಂ ಜೋಷಿ
ಉಡುಪಿ, ಎ.29:ಸಾರ್ವಜನಿಕರು ಕೋವಿಡ್-19 ರೋಗದ ಕುರಿತಂತೆ ಹೆಚ್ಚು ಜಾಗೃತರಾಗಿರಬೇಕು. ಇದಕ್ಕೆ ಸೂಕ್ತ ಲಸಿಕೆ ಸಿಗುವವರೆಗೂ ಎಲ್ಲಾ ಅಗತ್ಯ ಸುರಕ್ಷಾ ಕ್ರಮಗಳನ್ನು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವಂತೆ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಷಿ ಹೇಳಿದ್ದಾರೆ.
ಬುಧವಾರ, ಉಡುಪಿ ರೆಡ್‌ಕ್ರಾಸ್ ವತಿಯಿಂದ ಆರೋಗ್ಯ ಇಲಾಖೆಗೆ ನೀಡಲಾದ ಕೋವಿಡ್ ಮಾದರಿ ಸಂಗ್ರಹದ 2 ಕಿಯೋಸ್ಕ್ ಗಳು ಮತ್ತು ಪಿಪಿಇ ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆ ಹಸಿರು ವಲಯಕ್ಕೆ ಸೇರ್ಪಡೆಯಾದರೂ, ಕೋವಿಡ್-19 ವಿರುದ್ದದ ಹೋರಾಟ ಇನ್ನೂ ಮುಗಿದಿಲ್ಲ. ಈ ರೋಗಕ್ಕೆ ಲಸಿಕೆ ಕಂಡು ಹಿಡಿಯುವವರೆಗೂ ಸಾರ್ವಜನಿಕರು ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವ ವಿಧಾನಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಚಟುವಟಿಕೆಗಳೊಂದಿಗೆ ಪಾಲಿಸುವಂತೆ ನ್ಯಾ.ಜೋಷಿ ತಿಳಿಸಿದರು.
ಉಡುಪಿ ಜಿಲ್ಲೆ ಹಸಿರು ವಲಯಕ್ಕೆ ಸೇರಿರುವುದು ಸಮಾಧಾನ ತಂದಿದೆ. ಆದರೆ ಕೋವಿಡ್ ವಿರುದ್ದದ ಹೋರಾಟ ಇನ್ನೂ ಮುಂದುವರೆದಿದೆ. ಜಿಲ್ಲೆಯ ಗಡಿಗಳು ತೆರೆದ ನಂತರ ಸಾರ್ವಜನಿಕರು ಇನ್ನೂ ಹೆಚ್ಚಿನ ಜಾಗೃತೆ ವಹಿಸುಂತೆ ಅವರು ಕಿವಿಮಾತು ಹೇಳಿದರು.
ಡಿಹೆಚ್‌ಓ ಡಾ.ಸುಧೀರ್‌ಚಂದ್ರ ಸೂಡ ಮಾತನಾಡಿ, ರೆಡ್‌ಕ್ರಾಸ್ ವತಿಯಿಂದ ನೀಡಿರುವ ಕಿಯೋಸ್ಕ್‌ಗಳನ್ನು ಶಿರ್ವ ಮತ್ತು ಬ್ರಹ್ಮಾವರದ ಸಮುದಾಯ ಅರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಪರೀಕ್ಷೆಗೆ ಬಳಸಲಾ ಗುವುದು. ಜಿಲ್ಲೆಯಲ್ಲಿ ಮೂರು ಫೀವರ್ ಕ್ಲಿನಿಕ್‌ಗಳನ್ನು ತೆರೆಯಲಾಗಿದ್ದು, ಶೀಘ್ರವೇ ಅದನ್ನು 7ಕ್ಕೆ ವಿಸ್ತರಿಸಲಾಗುವುದು ಎಂದರು
ಜಿಲ್ಲೆಯಲ್ಲಿ ಮಾರ್ಚ್ 29ರ ನಂತರ ಕೋವಿಡ್-19 ಪ್ರಕರಣ ಕಂಡು ಬಂದಿಲ್ಲ. ಜಿಲ್ಲೆ ಸದ್ಯಕ್ಕೆ ಸುರಕ್ಷಿತ ವಲಯದಲ್ಲಿದೆ. ಆದರೆ ಜಿಲ್ಲೆಯ ಗಡಿಗಳಲ್ಲಿ ಇನ್ನೂ ಅನೇಕ ಜನರಿದ್ದು, ಹಾಟ್‌ಸ್ಪಾಟ್‌ನಿಂದ ಬಂದವರನ್ನು ಗುರುತಿಸಿ ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ. ಜಿಲ್ಲೆಯ ಜನತೆ ವೈಯಕ್ತಿಕ ಸ್ವಚ್ಛತೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳವುದಕ್ಕೆ ಆದ್ಯತೆ ನೀಡಬೇಕು. ಹೊರ ಜಿಲ್ಲೆಗಳಿಂದ ಬಂದವರ ಬಗ್ಗೆ ತಕ್ಷಣವೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವ ಮೂಲಕ ಜಿಲ್ಲೆಯನ್ನು ಕೋವಿಡ್ ಮುಕ್ತವಾಗಿಸಲು ಸಹಕರಿಸುವಂತೆ ಡಾ.ಸೂಡ ತಿಳಿಸಿದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ರೆಡ್‌ಕ್ರಾಸ್ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ರೆಡ್‌ಕ್ರಾಸ್ ವತಿಯಿಂದ ಇದುವರೆಗೂ 20000ಕ್ಕೂ ಅಧಿಕ ಮಂದಿಗೆ ಮಾಸ್ಕ್, ಸೋಪ್ ಮತ್ತು ಸ್ಯಾನಟೈಸರ್ ವಿತರಿಸಲಾಗಿದ್ದು, ಇನ್ನೂ ಅದನ್ನು ಮುಂದುವರಿಸಲಾಗುವುದು. ಸಾರ್ವಜನಿಕರು ಮಾಸ್ಕ್ ಧರಿಸಿ, ಶುಚಿತ್ವ ಮತ್ತು ಸುರಕ್ಷಿತ ಅಂತರ ಕಾಯ್ದುಕೊಂಡು ಕೋವಿಡ್-19 ನಿರ್ಮೂಲನೆ ಮಾಡಲು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ, ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಡಾ.ಉಮೇಶ್ ಪ್ರಭು ಉಪಸ್ಥಿತರಿದ್ದರು.
ರೆಡ್‌ಕ್ರಾಸ್‌ನ ಉಪಸಭಾಪತಿ ಡಾ.ಅಶೋಕ್‌ಕುಮಾರ್‌ವೈ.ಜಿ. ಸ್ವಾಗತಿಸಿದರು. ಖಜಾಂಚಿ ಚಂದ್ರಶೇಖರ್ ವಂದಿಸಿ, ಜಯರಾಮ ಆಚಾರ್ಯ ನಿರೂಪಿಸಿದರು.