×
Ad

ಆರೇ ತಿಂಗಳಲ್ಲಿ ಹೆಬ್ರಿ ವಲಯ ಅರಣ್ಯಾಧಿಕಾರಿಯ ವರ್ಗಾವಣೆ: ರಾಜಕೀಯ ಪ್ರಭಾವ ಆರೋಪ

Update: 2020-04-29 18:13 IST

ಉಡುಪಿ, ಎ.29: ಮರಗಳ್ಳ ರಾಜಕಾರಣಿಗಳ ವಿರುದ್ಧ ಕಾನೂನು ಕ್ರಮ ಜರಗಿಸಿದ್ದ ಹಾಗೂ ಶಾಸಕರ ಮಾತಿಗೆ ಕಾನೂನು ಮೀರಿ ಹೋಗಲ್ಲ ಎಂಬ ದಿಟ್ಟ ಪ್ರತ್ಯುತ್ತರ ನೀಡಿದ್ದ ಹೆಬ್ರಿ ವಲಯ ಅರಣ್ಯಾಧಿಕಾರಿ ವಿ.ಮುನಿರಾಜು ಅವರನ್ನು ಕೇವಲ ಆರು ತಿಂಗಳಲ್ಲಿಯೇ ವರ್ಗಾವಣೆಗೊಳಿಸಲಾಗಿದ್ದು, ಇದರ ಹಿಂದೆ ರಾಜಕೀಯ ಪ್ರಭಾವ ಇರುವುದಾಗಿ ಆರೋಪಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಆರು ತಿಂಗಳ ಹಿಂದೆ ಹೆಬ್ರಿ ವಲಯ ಅರಣ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ವಿ.ಮುನಿರಾಜು ಅವರನ್ನು ಎ.27ರಂದು ರಾಜ್ಯ ಸರಕಾರ ಬಂಡೀಪುರ ವನ್ಯಜೀವಿ ವಲಯಕ್ಕೆ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ರಾಜ್ಯಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಮುಕ್ತಾಯಗೊಂಡ ನಂತರ ಈ ಆದೇಶ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಧಿಕಾರ ಸ್ವೀಕರಿಸಿದ ಬಳಿಕ ಇವರು, ಬೇಳಂಜೆ ಗ್ರಾಮದ ಕೊಪ್ಪರಗುಂಡಿ ಎಂಬಲ್ಲಿ ಮಣ್ಣಿನ ಅಡಿಯಲ್ಲಿ ಹೂತಿಟ್ಟಿದ್ದ ಲಕ್ಷಾಂತರ ರೂ. ವೌಲ್ಯದ 87 ಮರದ ದಿಮ್ಮಿಗಳನ್ನು ವಶಪಡಿಸಿಕೊಂಡು, ಕಾರ್ಕಳ ತಾಪಂ ಬಿಜೆಪಿ ಸದಸ್ಯ ಅಮೃತ್ ಕುಮಾರ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಮೂಲಕ ಇವರು ಸ್ಥಳೀಯರಿಂದ ಮೆಚ್ಚುಗೆ ಪಾತ್ರರಾಗಿ, ಪ್ರಾಮಾಣಿಕ ಅಧಿಕಾರಿ ಎಂದೇ ಜನಮನ್ನಣೆಗಳಿಸಿದರು.

ಅದರ ನಂತರ ಫೆ.24ರಂದು ಉಡುಪಿ ತಾಪಂ ಸಾಮಾನ್ಯ ಸಭೆಯಲ್ಲಿ ಮೀಸಲು ಅರಣ್ಯದಲ್ಲಿ ರಸ್ತೆ ನಿರ್ಮಿಸಲು ಅನುಮತಿ ನೀಡುವಂತೆ ಗದರಿಸಿದ್ದ ಶಾಸಕ ಕೆ.ರಘುಪತಿ ಭಟ್ ಅವರಿಗೆ ‘ಕಾನೂನು ಮೀರಿ ಯಾವುದೇ ಕೆಲಸ ಮಾಡಲ್ಲ’ ಎಂದು ಮುನಿರಾಜು ಪ್ರತ್ಯುತ್ತರ ನೀಡಿದ್ದರು. ಹೀಗೆ ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯನ್ನು ಲಾಕ್‌ಡೌನ್ ಮಧ್ಯೆ ಏಕಾ ಏಕಿ ವರ್ಗಾವಣೆ ಮಾಡಿರುವುದರ ವಿರುದ್ಧ ಆರೋಪ ಹಾಗೂ ಆಕ್ರೋಶಗಳು ವ್ಯಕ್ತವಾಗುತ್ತಿವೆ.

‘ಕೊಟ್ಟ ಹುದ್ದೆಯನ್ನು ನಿಷ್ಠೆಯಿಂದ ನಿರ್ವಹಿಸುವ ಮೂಲಕ ಪ್ರಾಮಾಣಿಕ ಅರಣ್ಯ ಅಧಿಕಾರಿ ಎಂಬುದಾಗಿ ಇವರು ತೋರಿಸಿ ಕೊಟ್ಟಿದ್ದಾರೆ. ಪರಿಸರ ಪ್ರೇಮಿ ಯಾಗಿ ಯುವಪೀಳಿಗೆ, ವಿದ್ಯಾರ್ಥಿಗಳ, ಪರಿಸರ ಹೋರಾಟಗಾರರ ಅಚ್ಚು ಮೆಚ್ಚಿನ ಅಧಿಕಾರಿ ಎಂದು ಎನಿಸಿಕೊಂಡಿದ್ದಾರೆ. ಅದೆಷ್ಟು ಕಾಡುಗಳ್ಳರಿಗೆ ಎದೆಯಲ್ಲಿ ನಡುಕ ಹುಟ್ಟಿಸಿ, ವಾಹನಗಳನ್ನು ಮುಟ್ಟುಗೋಲು ಹಾಕಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಇಡೀ ಗ್ರಾಮದ ಜನತೆಯಿಂದ ಮೆಚ್ಚುಗೆಗೆ ಪಾತ್ರ ರಾಗಿದ್ದಾರೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ.

‘ಕಾಡುಪ್ರಾಣಿಗಳ ಬೇಟೆ ಹಾಗೂ ಅಕ್ರಮ ಮರಳು ದಂಧೆಕೋರಿಗೆ ಕಡಿ ವಾಣ ಹಾಕಿರುವ ಅಧಿಕಾರಿ, ರಾಜಕಾರಣಿಗಳ ಕುತಂತ್ರಕ್ಕೆ ವರ್ಗಾವಣೆ ಗೊಂಡಿದ್ದಾರೆ. ಆದುರಿಂದ ಸರಕಾರ ಇವರ ಆದೇಶವನ್ನು ರದ್ದುಗೊಳಿಸಿ ಮುಂದಿನ ಎರಡು ವರ್ಷಗಳ ಕಾಲ ಇವರಿಗೆ ಇಲ್ಲಿಯೇ ಕರ್ತವ್ಯ ನಿರ್ವಹಿ ಸಲು ಅವಕಾಶ ಕಲ್ಪಿಸಿಕೊಡುವಂತೆ ಹೆಬ್ರಿ ಜನತೆ ಸಾಮಾಜಿಕ ಜಾಲ ತಾಣಗಳ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News