ರಮಝಾನ್ ನೆಪದಲ್ಲಿ ಜವುಳಿ ಅಂಗಡಿ ತೆರೆಯುವುದಕ್ಕೆ ವಿರೋಧ
ಮಂಗಳೂರು, ಎ.29: ಕೊರೋನ ಮಧ್ಯೆಯೂ ಮುಸ್ಲಿಮರು ರಮಝಾನ್ ಉಪವಾಸ ಆಚರಣೆಯಲ್ಲಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಲ್ಲಲ್ಲಿ ಗುಂಪು ಸೇರದಂತೆ, ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸದಂತೆ ಸರಕಾರ ಮಾಡಿದ ಮನವಿಗೆ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲೂ ಸ್ಪಂದನೆ ಸಿಕ್ಕಿದೆ. ಈ ಮಧ್ಯೆ ಈದ್ ಪ್ರಯುಕ್ತ ಜವುಳಿ ಮತ್ತು ಫ್ಯಾನ್ಸಿ ಅಂಗಡಿಗಳನ್ನು ತೆರೆಯ ಬೇಕು ಎಂದು ಆಗ್ರಹ ಕೆಲವು ಕಡೆಗಳಿಂದ ಕೇಳಿ ಬಂದಿದೆ. ಇದಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಡಬಾರದು ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಆಗ್ರಹಿಸಿದ್ದಾರೆ.
ಈದ್ ನೆಪದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿ ಬಟ್ಟೆ ಹಾಗೂ ಇತರ ಫ್ಯಾನ್ಸಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟರೆ, ಜಿಲ್ಲೆಯಾದ್ಯಂತ ಜನದಟ್ಟಣೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಅಲ್ಲದೆ ಇದರಿಂದ ಜಿಲ್ಲಾಡಳಿತಕ್ಕೆ ಕೊರೋನ ಸೋಂಕಿನ ನಿಯಂತ್ರಣ ಮಾಡುವುದು ಕಷ್ಟವಾಗಬಹುದು. ಜಿಲ್ಲೆಯ ಜನ ಈವರೆಗೆ ಮಾಡಿದ ಮುಂಜಾಗ್ರತೆ ಎಲ್ಲವೂ ವ್ಯರ್ಥವಾಗಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮುಗಿಯುವವರೆಗೂ ಯಥಾಸ್ಥಿತಿಯನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.