×
Ad

ಬಂಟ್ವಾಳ: ಮಾಜಿ ಸೈನಿಕನ ಅಸಹಜ ಸಾವು

Update: 2020-04-29 20:53 IST

ಬಂಟ್ವಾಳ, ಎ. 29: ಮಾನಸಿಕ ಅಸ್ವಸ್ಥೆಯರಾದ ಇಬ್ಬರು ಸಹೋದರಿಯೊಂದಿಗೆ ಜೀವಿಸುತ್ತಿದ್ದ ಮಾಜಿ ಸೈನಿಕನೋರ್ವ ಮನೆಯಲ್ಲೇ ಮೃತಪಟ್ಟಿದ್ದರೂ ಐದು ದಿನಗಳ ಬಳಿಕ ಬೆಳಕಿಗೆ ಬಂದಿರುವ ಘಟನೆ ತಾಲೂಕಿನ ಪಂಜಿಕಲ್ಲು ಗ್ರಾಮದ ಪಲ್ಲೊಟ್ಟು ಎಂಬಲ್ಲಿ ನಡೆದಿದೆ. 

ಇಲ್ಲಿನ ನಿವಾಸಿ ರಿಚಾರ್ಡ್ ಫರ್ನಾಂಡೀಸ್(55) ಮೃತಪಟ್ಟ ಮಾಜಿ ಸೈನಿಕ. ಅವರು ಶುಕ್ರವಾರ ರಾತ್ರಿ ಮಲಗಿದಲ್ಲೇ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಅವಿವಾಹಿತರಾದ ರಿಚಾರ್ಡ್ ಫರ್ನಾಂಡೀಸ್ ತನ್ನ ಇಬ್ಬರು ಅವಿವಾಹಿತರಾದ ಸಹೋದರಿಯೊಂದಿಗೆ ಇಲ್ಲಿನ ಮನೆಯೊಂದರಲ್ಲಿ ವಾಸವಾಗಿದ್ದರು. ಇಬ್ಬರು ಸಹೋದರಿಯರೂ ಮಾನಸಿಕ ಅಸ್ವಸ್ಥರಾಗಿದ್ದಾರೆ. ರಿಚಾರ್ಡ್ ದಿನನಿತ್ಯ ಇಲ್ಲಿನ ಹಾಲಿನ ಡೈರಿಗೆ ಹಾಲು ತರುತ್ತಿದ್ದರು. ಆದರೆ ಕೆಲವು ದಿನಗಳಿಂದ ಅವರು ಡೈರಿಗೆ ಹಾಲು ತೆಗೆದುಕೊಂಡು ಹೋಗಿಲ್ಲ. ಅಲ್ಲದೆ ಅವರು ಕಾಣಲು ಸಿಗದ ಹಿನ್ನೆಲೆಯಲ್ಲಿ ನೆರೆಮನೆಯ ಜನರು ಅವರ ಮನೆಗೆ ಹೋಗಿ ವಿಚಾರಿಸಿದಾಗ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೆರೆಮನೆಯವರು ವಿಚಾರಿಸಿದಾಗ ಆತ ಮಲಗಿದ್ದಾನೆ ಎಂದು ಇಬ್ಬರು ಸಹೋದರಿಯರು ತಿಳಿಸಿದ್ದಾರೆ. ಅನುಮಾನಗೊಂಡ ನೆರೆಮನೆಯವರು ಮನೆಯ ಒಳಗೆ ಹೋದಾಗ ವಾಸನೆ ಬರುತ್ತಿತ್ತು. ಮನೆಯ ಕೋಣೆಯೊಂದರಲ್ಲಿ ರಿಚಾರ್ಡ್ ಮಲಗಿದಲ್ಲಿಯೇ ಮೃತಪಟ್ಟಿದ್ದರು. ಶುಕ್ರವಾರ ರಾತ್ರಿ ಮಲಗಿದ ಅವರು ಯಾವುದೋ ಕಾರಣದಿಂದ ಮೃತಪಟ್ಟಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಸೈ ಪ್ರಸನ್ನ ಕುಮಾರ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News