ಸಾರ್ವಜನಿಕ ಸಾರಿಗೆ ವಾಹನಗಳಿಗೆ ಕೋವಿಡ್-19 ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಆಗ್ರಹ
ಉಡುಪಿ, ಎ. 29: ರಾಜ್ಯದಲ್ಲಿ ಕೊರೋನ ಲಾಕ್‌ಡೌನ್‌ನಿಂದ ಸಾರ್ವಜನಿಕ ಸಾರಿಗೆ ವಾಹನಗಳಾದ ರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಬಸ್, ಲಾರಿ ಹಾಗೂ ಇತರ ವಾಹನಗಳ ಮಾಲಕರು ಮುಂದೇನು ಎಂದು ಕೈಚೆಲ್ಲಿ ಕುಳಿತ್ತಿದ್ದಾರೆ. ಸದ್ಯಕ್ಕೆ ಈ ಉದ್ಯಮ ಗಳು ಮತ್ತೆ ಪ್ರಾರಂಭಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಆದುದರಿಂದ ಇವುಗಳಿಗೆ ಕೋವಿಡ್-19 ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಸಾರಿಗೆ ಉದ್ಯಮಿಯೂ ಆಗಿರುವ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಆಗ್ರಹಿಸಿದ್ದಾರೆ.
ಒಂದೆಡೆ ತೆರಿಗೆ, ಮತ್ತೊಂದೆಡೆ ವಿಮೆ ಹಾಗೂ ಬ್ಯಾಂಕ್ ಸಾಲಗಳನ್ನು ಕಟ್ಟುವ ದಿನ ಸಮೀಪಿಸುತ್ತಿದೆ. ಒಂದು ವೇಳೆ ಲಾಕ್‌ಡೌನ್ ಮುಗಿದರೂ ಸುರಕ್ಷಿತ ಅಂತರ ಕಾಪಾಡಬೇಕಾಗಿರುವುದರಿಂದ ಈ ಉದ್ಯಮವನ್ನು ಮತ್ತೆ ಪ್ರಾರಂಭಿಸುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ. ಉದ್ಯಮ ಶುರುವಾದ ನಂತರವಷ್ಟೇ ನಿಜವಾದ ಸಮಸ್ಯೆ ಗೋಚರಿಸುತ್ತದೆ. ಅದಕ್ಕಾಗಿ ಕೇಂದ್ರ ಹಾಗು ರಾಜ್ಯ ಸರಕಾರಗಳು ಸೂಕ್ತ ಪ್ಯಾಕೇಜ್ ನೀಡದೇ ಇದ್ದರೇ ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರುವುದು ಖಂಡಿತ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದುದರಿಂದ ತೆರಿಗೆ ವಿನಾಯಿತಿಯೊಂದಿಗೆ ಆರ್ಥಿಕ ಪ್ಯಾಕೇಜ್ ಮತ್ತು ಲಾಕ್ ಡೌನ್ ಸಮಯದ ವಿಮೆನ್ನು ಮುಂದಿನ ಅವಧಿಗೆ ಮುಂದುವರಿಸುವ ಯೋಜನೆ ಹಾಕಿಕೊಂಡು, ಬಾಕಿ ಇರುವ ಬ್ಯಾಂಕ್ ಸಾಲದ ಕಂತನ್ನು ಬೇರೆಯೇ ಸಾಲವನ್ನಾಗಿ ಪರಿಗಣಿಸಿ ಅದಕ್ಕೆ ಕೋವಿಡ್-19 ವಿಶೇಷ ರಿಯಾಯಿತಿ ದರದ ಬಡ್ಡಿ ಹಾಕುವಂತೆ ಕುಯಿಲಾಡಿ ಸುರೇಶ ನಾಯಕ್ ಒತ್ತಾಯಿಸಿದ್ದಾರೆ.