ಮಟ್ಟುಗುಳ್ಳ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ
ಉಡುಪಿ, ಎ.29: ಜಿಲ್ಲೆಯ ಕಾಪು ತಾಲೂಕಿನ ಮಟ್ಟು, ಉಳಿಯಾರಗೋಳಿ ಹಾಗೂ ಕೋಟೆ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳೆಯುವ ಮಟ್ಟುಗುಳ್ಳ ಬದನೆಯು ಭೌಗೋಳಿಕ ಮಾನ್ಯತೆ ಪಡೆದಿರುವ ವಿಶಿಷ್ಟ ತರಕಾರಿ ಬೆಳೆಯಾಗಿದೆ.
ಇದು ತನ್ನ ವಿಶೇಷ ರುಚಿಯಿಂದ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದು ಉಡುಪಿ ಮತ್ತು ಮಂಗಳೂರು ಜಿಲ್ಲೆಗಳ ಮಾರುಕಟ್ಟೆ ಯಲ್ಲಿ ತುಂಬಾ ಬೇಡಿಕೆ ಯನ್ನು ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 89 ಮಟ್ಟುಗುಳ್ಳ ಬದನೆ ಬೆಳೆಗಾರರು 128 ಎಕರೆ ವಿಸ್ತೀರ್ಣ ದಲ್ಲಿ ಮಟ್ಟುಗುಳ್ಳ ಬದನೆಯನ್ನು ಬೆಳೆಯುತ್ತಿದ್ದಾರೆ.
ಆದರೆ ಈ ವರ್ಷ ಕೋವಿಡ್-19ರ ಸಂಬಂದ ಲಾಕ್‌ಡೌನ್ ಇರುವುದರಿಂದ ಮಟ್ಟುಗುಳ್ಳ ಬದನೆ ಮಾರುಕಟ್ಟೆ ವ್ಯವಸ್ಥೆಗೆ ತೊಂದರೆ ಯಾಗಿದೆ. ಇದೀಗ ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆ, ವಾದಿರಾಜ ಮಟ್ಟುಗುಳ್ಳ ಬೆಳೆಗಾರರ ಸಂಘ ದವರೊಂದಿಗೆ ಚರ್ಚಿಸಿ, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳ ತೋಟಗಾರಿಕೆ ಇಲಾಖೆಯ ಹಾಪ್‌ಕಾಮ್ಸ್ ವತಿಯಿಂದ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೇ ಇವುಗಳ ಸರಬರಾಜು ಮಾಡಲು ಇಲಾಖೆಯಿಂದ ಪಾಸ್ ವಿತರಣೆ ಮಾಡಲಾಗಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಈವರೆಗೆ ಬೆಳೆ ನಷ್ಟವಾಗಿಲ್ಲ ಎಂದು ಉಡುಪಿ ತೋಟಗಾರಿಕೆ ಇಲಾಖೆ ಹಾಗೂ ಮಟ್ಟುಗುಳ್ಳ ಬೆಳೆಗಾರರ ಸಂಘ ತಿಳಿಸಿದೆ.
ಇದರ ಜೊತೆಗೆ ಅನಾನಸ್, ಕಲ್ಲಂಗಡಿ ಮತ್ತು ಇತರೇ ತೋಟಗಾರಿಕೆ ಬೆಳೆಗಳ ಮಾರುಕಟ್ಟೆ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಉಡುಪಿ ತಾಲೂಕು ತೋಟಗಾರಿಕೆ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.