ಬಜೆಯಲ್ಲಿ ನೀರಿನ ಪ್ರಮಾಣ ಇಳಿಕೆ: ಶಿರೂರು ಬಳಿ ಪಂಪಿಂಗ್
ಉಡುಪಿ, ಎ.29: ಉಡುಪಿ ನಗರಕ್ಕೆ ನೀರು ಪೂರೈಕೆ ಮಾಡುವ ಸ್ವರ್ಣ ನದಿಯ ಬಜೆ ಡ್ಯಾಮ್‌ನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಇಳಿಮುಖ ವಾಗುತ್ತಿರುವುದರಿಂದ ವಿವಿಧ ಗುಂಡಿಗಳಲ್ಲಿ ಶೇಖರಣೆಯಾಗಿರುವ ನೀರನ್ನು ಪಂಪಿಂಗ್ ಮೂಲಕ ಹಾಯಿ ಸುವ ಕಾರ್ಯ ನಡೆಸಲಾಗುತ್ತಿದೆ.
ಶಿರೂರು ಡ್ಯಾಮ್ ಸಮೀಪದ ಸಾಣೆಕಲ್ಲು ಗುಂಡಿಯಿಂದ ನೀರು ಪಂಪಿಂಗ್ ಮಾಡುವ ಕಾರ್ಯ ಪೂರ್ಣಗೊಂಡಿದ್ದು, ಇದೀಗ ಶಿರೂರು ಮೂಲಮಠದ ಹಿಂಬದಿಯಲ್ಲಿರುವ ಹೊಯಿಗೆ ಗುಂಡಿಯಿಂದ ನೀರೆತ್ತುವ ಕಾರ್ಯ ನಡೆಯು ತ್ತಿದೆ. ಈ ಮೂಲಕ ನೀರು ಶಿರೂರು ಡ್ಯಾಮ್‌ನಿಂದ ಬಜೆಗೆ ಹರಿದು ಬರುತ್ತಿದೆ.
ಸದ್ಯ ಬಜೆಯಲ್ಲಿ 3.6 ಮೀಟರ್‌ನಷ್ಟು ನೀರಿದ್ದು, ಇದನ್ನು 20 ದಿನಗಳಿಗೆ ಬೇಕಾಗುವಷ್ಟು ಬಳಸಬಹುದಾಗಿದೆ. ಹೊಯಿಗೆ ಗುಂಡಿ ನಂತರ ಮರ್ಣೆ ಹಾಗೂ ಭಂಡಾರಿಬೆಟ್ಟು ಎಂಬಲ್ಲಿರುವ ಗುಂಡಿಯಿಂದ ನೀರು ಪಂಪಿಂಗ್ ಮಾಡಲಾಗುವುದು. ಇಲ್ಲಿ 15 ದಿನಗಳಿಗೆ ಬೇಕಾಗುವಷ್ಟು ನೀರು ಇದೆ. ನಂತರ ಪುತ್ತಿಗೆಯಲ್ಲಿರುವ ಗುಂಡಿಯಲ್ಲಿ ಸುಮಾರು 10 ದಿನಗಳಿಗೆ ಬೇಕಾಗುವಷ್ಟು ನೀರಿನ ಸಂಗ್ರಹ ಇದೆ. ಆದುದರಿಂದ ಮೇ ಅಂತ್ಯದವರೆಗೆ ನೀರಿಗೆ ಸಮಸ್ಯೆ ಆಗುವುದಿಲ್ಲ ಎಂದು ನಗರಸಭೆ ಸಹಾಯಕ ಕಾರ್ಯಪಾಲ ಅಭಿಯಂತರ ಮೋಹನ್ ರಾಜ್ ತಿಳಿಸಿದ್ದಾರೆ.