ಲಾಕ್‌ಡೌನ್ ಹಿನ್ನೆಲೆ : ನೆರವಿನೊಂದಿಗೆ ಕನ್ನಡಿಗರ ಕೈ ಹಿಡಿದ ಕೆಸಿಎಫ್ ಸೌದಿ ಅರೇಬಿಯಾ

Update: 2020-04-29 16:35 GMT

ಸೌದಿ ಅರೇಬಿಯಾ, ಎ.29: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ್ಯಂತ ಸಂಕಷ್ಟಕ್ಕೆ ಒಳಗಾಗಿರುವ ಭಾರತೀಯ ಹಾಗೂ ಕನ್ನಡಿಗರಿಗೆ ಸೌದಿ ಅರೇಬಿಯಾದ ಅನಿವಾಸಿ ಕನ್ನಡಿಗರ ಒಕ್ಕೂಟವಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ನೆರವಿನ ಹಸ್ತ ಚಾಚಿದೆ. ಕೆಸಿಎಫ್ ಸಂಘಟನೆಯು ತನ್ನ ಸ್ವಯಂ ಸೇವಕರನ್ನು ಹಲವು ತಂಡಗಳಾಗಿ ವಿಂಗಡಿಸಿದೆ. ಲಾಕ್‌ಡೌನ್‌ನಿಂದ ಉದ್ಯೋಗ ಹಾಗೂ ವೇತನವಿಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ಸಾವಿರಾರು ಜನರಿಗೆ 1 ತಿಂಗಳ ಆಹಾರ ಸಾಮಾಗ್ರಿಗಳನ್ನು ವಿತರಿಸಿ ನೆರವು ನೀಡುತ್ತಿದೆ.

ದಿನಸಿ ಸಾಮಾಗ್ರಿಗಳ ಕಿಟ್, ಚಿಕಿತ್ಸೆ, ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ, ರಕ್ತದಾನ ಇತ್ಯಾದಿಗೆ ದಿನದ 24 ಗಂಟೆ ಕಾರ್ಯಾಚರಿಸುವ ಟ್ರೋಲ್ ಫ್ರೀ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೆಸಿಎಫ್ ಅನಿವಾಸಿ ಭಾರತೀಯರಿಗೆ ಸೂಚಿಸಿತ್ತು. ಅದರಂತೆ ಸೌದಿ ಅರೇಬಿಯಾದ ರಿಯಾದ್, ದಮ್ಮಾಮ್, ಜುಬೈಲ್, ಅಲ್ ಘಸೀಮ್, ಜಿದ್ದಾ, ಮಕ್ಕಾ, ಮದೀನಾ, ಜೀಝಾನ್, ತಬೂಕ್, ಯಾಂಬೂ ಮುಂತಾದ ಪ್ರಾಂತ್ಯದಲ್ಲಿ ಕೆಸಿಎಫ್ ಸ್ವಯಂ ಸೇವಕರ ತಂಡವು ಜಾತಿ, ಧರ್ಮದ ಭೇದವಿಲ್ಲದೆ ಸಹಾಯ ಹಸ್ತ ಚಾಚಿದೆ.

ಕೆಸಿಎಫ್-ಐಎನ್‌ಸಿ ಸಂಘಟನೆಯ ಮುಖಂಡ ಖಮರುದ್ದೀನ್ ಗೂಡಿನಬಳಿ, ಸೌದಿ ಅರೇಬಿಯಾ ರಾಷ್ಟೀಯ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್, ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ, ಕೋಶಾಧಿಕಾರಿ ಮುಹಮ್ಮದ್ ಕಲ್ಲರ್ಬೆರವರ ಮೇಲ್ನೋಟದಲ್ಲಿ ಕೆಸಿಎಫ್ ಸಾಂತ್ವನ ವಿಭಾಗದ ಅಧ್ಯಕ್ಷ ಮುಹಮ್ಮದ್ ಮಲಬೆಟ್ಟು ಮತ್ತು ಕಾರ್ಯದರ್ಶಿ ಅಶ್ರಫ್ ಕಿನ್ಯರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದೆ.

ಉಮ್ರಾ ಯಾತ್ರೆಗೆ ಬಂದು ಊರಿಗೆ ಮರಳಾಗದೆ ಮಕ್ಕಾ ಮತ್ತು ಮದೀನಾದಲ್ಲಿರುವ ಯಾತ್ರಾರ್ಥಿಗಳಿಗೂ ಕೆಸಿಎಫ್ ಅವಶ್ಯಕ ನೆರವುಗಳನ್ನು ನೀಡುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News