ಕೊರೋನ ವೈರಸ್: ಆಗ್ರಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಮಹಿಳೆಯ ಸಾವು, ಚಿಕಿತ್ಸೆ ನಿರಾಕರಿಸಿದ್ದ ಆರೋಪ

Update: 2020-04-29 16:36 GMT
ಸಾಂದರ್ಭಿಕ ಚಿತ್ರ

ಆಗ್ರಾ, ಎ.29: ಇಲ್ಲಿನ ಎಸ್.ಎನ್.ಮೆಡಿಕಲ್ ಕಾಲೇಜು ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ದಾಖಲಿಸಲಾಗಿದ್ದ 61ರ ಹರೆಯದ ಮಹಿಳೆಯೋರ್ವರು ಮೃತಪಟ್ಟಿದ್ದು,ವೈದ್ಯರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ನಿರ್ಲಕ್ಷ ತನ್ನ ತಾಯಿಯ ಸಾವಿಗೆ ಕಾರಣ ಎಂದು ಮಹಿಳೆಯ ಪುತ್ರ ಮೋಹಿತ್ ಶರ್ಮಾ ಆರೋಪಿಸಿದ್ದಾರೆ.

ಸೋಮವಾರ ಶರ್ಮಾ ವೈದ್ಯರಿಂದ ಚಿಕಿತ್ಸೆ ಲಭಿಸದ ಬಳಿಕ ಮರಣಾಸನ್ನ ಸ್ಥಿತಿಯಲ್ಲಿದ್ದ ತನ್ನ ತಾಯಿಯ ಬಾಯಿಗೆ ಬಾಯಿ ಹಚ್ಚಿ ಉಸಿರಾಡಿಸುವ ಹತಾಶ ಪ್ರಯತ್ನ ಮಾಡುತ್ತಿದ್ದನ್ನು ತೋರಿಸುವ ವೀಡಿಯೊವೊಂದು ಬಹಿರಂಗಗೊಂಡಿದೆ. ಮಹಿಳೆ ಅದೇ ದಿನ ಸಂಜೆ ಕೊನೆಯುಸಿರೆಳೆದಿದ್ದರು.

ತನ್ನ ತಾಯಿ ಕಳೆದ ಮೂರು ವರ್ಷಗಳಿಂದ ದೀರ್ಘಕಾಲಿಕ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ರವಿವಾರ ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದೆ. ಆದರೆ ಕೊರೋನ ವೈರಸ್ ಪರೀಕ್ಷೆ ಮಾಡದೇ ಯಾವುದೇ ರೋಗಿಯನ್ನು ದಾಖಲಿಸಿಕೊಳ್ಳುವುದಿಲ್ಲ ಎಂದು ಅಲ್ಲಿಯ ವೈದ್ಯರು ಹೇಳಿದ ಬಳಿಕ ತಾಯಿಯನ್ನು ಎಸ್.ಎನ್. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಿದ್ದೆ. ತನ್ನ ತಾಯಿಯ ಅನಾರೋಗ್ಯಕ್ಕೂ ಕೋವಿಡ್-19ಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದ ಅಲ್ಲಿಯ ಸಿಬ್ಬಂದಿಗಳು ಐಸೋಲೇಷನ್ ವಾರ್ಡ್‌ನಲ್ಲಿರುವಂತೆ ಸೂಚಿಸಿದ್ದರು. ಯಾರೂ ನೆರವಿಗೆ ಬಾರದ್ದರಿಂದ ತಾನೇ ತಾಯಿಯನ್ನು ಹೊತ್ತುಕೊಂಡು 33 ಮೆಟ್ಟಿಲುಗಳನ್ನು ಹತ್ತಿದ್ದೆ. ಅಲ್ಲಿಯ ಸಿಬ್ಬಂದಿಗಳು ತನ್ನ ತಾಯಿಗೆ ಕುಡಿಯಲು ನೀರನ್ನೂ ಕೊಟ್ಟಿರಲಿಲ್ಲ ಎಂದು ಶರ್ಮಾ ಆರೋಪಿಸಿದ್ದಾರೆ.

ತನ್ನ ತಾಯಿಯ ಸ್ಯಾಂಪಲ್‌ನ್ನು ಕೊರೋನ ವೈರಸ್ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಬರುವ ಮೊದಲೇ ತಾಯಿ ತನ್ನ ತೋಳುಗಳಲ್ಲಿ ಕೊನೆಯುಸಿರೆಳೆದರು ಎಂದು ಅವರು ಹೇಳಿದ್ದಾರೆ.

ಆಗ್ರಾಕ್ಕೆ ಕೋವಿಡ್-19ಗೆ ನೋಡಲ್ ಅಧಿಕಾರಿಯಾಗಿರುವ ಅಲೋಕ ಕುಮಾರ್ ಅವರು ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News