ಕೊರೋನ ಪಾಸಿಟಿವ್ ಹಿನ್ನೆಲೆ: ಬೋಳೂರು ಪರಿಸರ ಸೀಲ್‌ಡೌನ್

Update: 2020-04-30 10:35 GMT

ಮಂಗಳೂರು, ಎ.30: ಕೊರೋನ ಸೋಂಕು ದೃಢಪಟ್ಟ 58ರ ಹರೆಯದ ಮಹಿಳೆಯ ಮನೆಯಿರುವ ಮನಪಾ ವ್ಯಾಪ್ತಿಯ ಬೋಳೂರು ಗ್ರಾಮದ ಬೋಳೂರು ಪರಿಸರವನ್ನು ಸೀಲ್‌ಡೌನ್ ಮಾಡಲಾಗಿದೆ. ಅಂದರೆ 135 ಮನೆಗಳು, 12 ಅಂಗಡಿಗಳು ಸೀಲ್‌ಡೌನ್ ವ್ಯಾಪ್ತಿಯಲ್ಲಿ ಬರುತ್ತಿದೆ. ಸದ್ಯ ಸುಮಾರು 640 ಮಂದಿ ಸೀಲ್‌ಡೌನ್ ವ್ಯಾಪ್ತಿಯಲ್ಲಿ ನೆಲೆಸುತ್ತಿದ್ದಾರೆ. ಇವರ ಮನೆಯ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಅಂದರೆ ಪೂರ್ವದಲ್ಲಿ ಜೇಮ್ಸ್ ಡಿಸೋಜರ ಮನೆ, ಪಶ್ಚಿಮದಲ್ಲಿ ಹಿಂದೂ ರುದ್ರಭೂಮಿ, ಉತ್ತರದಲ್ಲಿ ಹೊಟೇಲ್ ಬಿಜೆ ಮತ್ತು ಸುಲ್ತಾನ್ ಬತ್ತೇರಿ ರಸ್ತೆ ಹಾಗೂ ದಕ್ಷಿಣದಲ್ಲಿ ಹಿಂದೂ ರುದ್ರಭೂಮಿಯವರೆಗೆ ಕಂಟೈನ್‌ಮೆಂಟ್ ವಲಯ ಎಂದು ಗುರುತಿಸಲಾಗಿದೆ.

ಕಂಟೈನ್‌ಮೆಂಟ್ ವಲಯ ಮುಂದಿನ 28 ದಿನಗಳ ಕಾಲ ಸಂಪೂರ್ಣ ಸೀಲ್ ಡೌನ್ ಆಗಿರಲಿದೆ. ಈ ಪ್ರದೇಶದ ಮನೆಗಳ ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರುವಂತಿಲ್ಲ ಹಾಗೂ ಈ ಪ್ರದೇಶಕ್ಕೆ ಹೊರಗಿನ ಯಾರೂ ಪ್ರವೇಶಿಸುಂತಿಲ್ಲ. ಈ ಪ್ರದೇಶದ ಪ್ರತೀ ಮನೆಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಭೇಟಿ ನೀಡಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇಲ್ಲಿನ ಜನರಿಗೆ ದಿನಸಿ, ಔಷಧ ಸಹಿತ ದಿನ ಬಳಕೆಯ ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸಲು ಆಡಳಿತ ವರ್ಗ ವ್ಯವಸ್ಥೆ ಮಾಡಲಿದೆ.

ಸೋಂಕು ಪೀಡಿತೆಯ ಮನೆಯ 5 ಕಿ.ಮೀ. ಬಫರ್ ರೆನ್ ಎಂದು ಘೋಷಿಸಲಾಗಿದೆ. ಅಂದರೆ ಪೂರ್ವದಲ್ಲಿ ಬೋಂದೆಲ್, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಉತ್ತರದಲ್ಲಿ ಎಂಸಿಎಫ್ (ರಾ.ಹೆ), ದಕ್ಷಿಣದಲ್ಲಿ ನೇತ್ರಾವತಿ ನದಿ ಬೋಳಾರ ಬಫರ್ ರೆನ್ ವ್ಯಾಪ್ತಿಗೆ ಬರುತ್ತದೆ. ಈ ಪ್ರದೇಶದಲ್ಲಿ 16,350 ಮನೆಗಳಿವೆ, 1,275 ಅಂಗಡಿ ಮುಂಗಟ್ಟುಗಳು, ಸುಮಾರು 79,800 ಜನರು ನೆಲೆಸುತ್ತಿದ್ದಾರೆ. ಇಲ್ಲಿನ ಎಲ್ಲಾ ಮನೆಗಳಿಗೆ ಆಶಾ ಕಾರ್ಯಕರ್ತರು ಭೇಟಿ ನೀಡಿ ಮನೆಮಂದಿಯ ಆರೋಗ್ಯವನ್ನು ವಿಚಾರಿಸಲಿದ್ದಾರೆ. ಈ ಪ್ರದೇಶಗಳಲ್ಲೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಲಾಕ್‌ಡೌನ್ ಸಂದರ್ಭದಲ್ಲಿರುವ ಎಲ್ಲ ನಿಬಂಧನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸುರಕ್ಷಿತ ಅಂತರ ಕಾಪಾಡುವುದು ಮುಂದಿನ 28 ದಿನಗಳ ಕಾಲ ಜಾರಿಯಲ್ಲಿರುತ್ತದೆ.

* ಕಮಾಂಡರ್ ನೇಮಕ
ಮಂಗಳೂರು ಸ್ಮಾರ್ಟ್ ಸಿಟಿ ಲಿ.ನ ಎಕ್ಸಿಕ್ಯೂಟಿವ್ ಇಂಜಿನಿಯರ್‌ರನ್ನು ಈ ಪ್ರದೇಶದ ಕಮಾಂಡರ್ ಆಗಿ ದ.ಕ.ಜಿಲ್ಲಾಧಿಕಾರಿ ಜವಾಬ್ದಾರಿ ವಹಿಸಿ ಆದೇಶಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News