ಚಾರ್ಮಾಡಿ ಘಾಟಿ: ತಂಡದಿಂದ ಕಾಡು ಪ್ರಾಣಿಗಳಿಗೆ ಆಹಾರ
ಮಂಗಳೂರು, ಎ. 30: ಲಾಕ್‌ಡೌನ್‌ನಿಂದಾಗಿ ಹಲವೆಡೆ ಪ್ರಾಣಿಗಳೂ ಆಹಾರದ ಸಮಸ್ಯೆಯನ್ನು ಎದುರಿಸುತ್ತಿದ್ದು, ಚಾರ್ಮಾಡಿ ಘಾಟಿಯಲ್ಲಿ ಯುವಕರ ತಂಡವೊಂದು ಮಂಗಗಳು ಸೇರಿದಂತೆ ಮೂಕ ಪ್ರಾಣಿಗಳಿಗೆ ಆಹಾರ, ನೀರು ಒದಗಿಸುವ ಕಾರ್ಯವನ್ನು ಮಾಡುತ್ತಿದೆ.
ಸ್ಥಳೀಯರಾದ ಮನ್ಸೂರು ಚಾರ್ಮಾಡಿ, ಸಿನಾನ್ ಚಾರ್ಮಾಡಿ, ಅಯಾಝ್ ಚಾರ್ಮಾಡಿ, ಅಶ್ರಫ್ ಚಾರ್ಮಾಡಿ ಎಂವಬರು ಘಾಟಿಯ ವಿವಿಧ ಕಡೆಗಳಲ್ಲಿ ಮಂಗಗಳಿಗೆ ನೀರು, ತಿಂಡಿಯ ವ್ಯವಸ್ಥೆ ಮಾಡುತ್ತಿದ್ದಾರೆ. ತರಕಾರಿ ಹಣ್ಣು ಹಂಪಲುಗಳ ಜತೆಗೆ ಹಳೆ ಟಯರ್‌ಗಳಿಗೆ ಪ್ಲಾಸ್ಟಿಕ್ ಕವರ್ ಹೊದಿಸಿ ಅದರಲ್ಲಿ ನೀರು ಹಾಕಿ ಮಂಗಗಳಿಗೆ ಆಹಾರ ನೀಡುತ್ತಿದ್ದಾರೆ.
ಹಸಿವಿಗೆ ಮಾನವೀಯತೆ ಒಂದೇ ಧರ್ಮ, ಹಸಿವು ಎಲ್ಲರಿಗೂ ಇದೆ ಎಂಬ ಧ್ಯೇಯದೊಂದಿಗೆ ಈ ಸೇವೆಯನ್ನು ಮಾಡುತ್ತಿರುವ ಈ ಯುವಕರ ತಂಡ, ಸ್ಥಳೀಯರು ತಮ್ಮ ಮನೆಗಳಲ್ಲಿ ತಮಗೆ ಬೇಡವಾದ, ಹೆಚ್ಚಾಗಿರುವ ತರಕಾರಿ ಹಣ್ಣುಗಳನ್ನು ನೀಡಲು ಬಯಸಿದ್ದಲ್ಲಿ ಬೆಳಗ್ಗೆ 8ರಿಂದ 9 ಗಂಟೆಯ ನಡುವೆ ಕರೆ ಮಾಡಿದರೆ, ಅವುಗಳನ್ನು ಮನೆಗಳಿಂದ ಸಂಗ್ರಹಿಸಿ ತಾವು ಅವುಗಳನ್ನು ಚಾರ್ಮಾಡಿ ಘಾಟಿಯ ಪ್ರಾಣಿಗಳಿಗೆ ನೀಡುವುದಾಗಿಯೂ ಹೇಳಿಕೊಂಡಿದ್ದಾರೆ.
ಸ್ಥಳೀಯ ಆಸಕ್ತರು ಮನ್ಸೂರ್ ಅಹ್ಮದ್- 9008983800, ಅಯಾಝ್ ಚಾರ್ಮಾಡಿ- 8722736043, ಸಿನಾನ್ ಚಾರ್ಮಾಡಿ- 9591340972 ಇವರನ್ನು ಸಂಪರ್ಕಿಸಬಹುದು.