ಕೊರೋನ ವೈರಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರನೇ ಬಲಿ
ಬಂಟ್ವಾಳ, ಎ.30: ಕೋವಿಡ್ - 19 (ಕೊರೋನ) ಸೋಂಕು ದೃಢಪಟ್ಟು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಬಂಟ್ವಾಳ ಪೇಟೆಯ 67 ವರ್ಷ ಪ್ರಾಯದ ಮಹಿಳೆಯೊಬ್ಬರು ಗುರುವಾರ ಸಂಜೆ ಮೃತಪಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ಮಹಿಳೆಯನ್ನು ಎಪ್ರಿಲ್ 18ರಂದು ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ದಿನದಿಂದ ಯಥಾ ಸ್ಥಿತಿಯಲ್ಲಿದ್ದ ಇವರ ಆರೋಗ್ಯ ಕಳೆದ ನಾಲ್ಕು ದಿನಗಳಿಂದ ಗಂಭೀರ ಸ್ಥಿತಿ ಸ್ವರೂಪ ಪಡೆದಿತ್ತು. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ವೆಂಟಿಲೆಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದ ಈ ಮಹಿಳೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟಿದ್ದಾರೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ವೈರಸ್‍ಗೆ ಮೂವರು ಬಲಿಯಾದರು.
ಮೃತ ಮಹಿಳೆ ಎಪ್ರಿಲ್ 19 ಮತ್ತು 23ರಂದು ಮೃತಪಟ್ಟ ಬಂಟ್ವಾಳ ಪೇಟೆಯ ಒಂದೇ ಮನೆಯ ಇಬ್ಬರು (ಸೊಸೆ ಮತ್ತು ಅತ್ತೆ) ಮಹಿಳೆಯರ ನೆರೆಮನೆಯವರಾಗಿದ್ದಾರೆ. ಇವರಿಗೆ ಎಪ್ರಿಲ್ 19ರಂದು ಮೃತಪಟ್ಟ ಮಹಿಳೆಯ ಸಂಪರ್ಕದಿಂದ ಸೋಂಕು ತಗುಲಿತ್ತು. ಈ ಇಬ್ಬರು ಮಹಿಳೆಯರನ್ನು ಒಂದೇ ದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಹಿಳೆಗೆ ಸೋಂಕು ಪಾಸಿಟಿವ್ ಬಂದ ಬಳಿಕ ಅವರ ಪತಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಹಲವರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಈ ಪೈಕಿ ಮಹಿಳೆಯ 33 ವರ್ಷ ಪ್ರಾಯದ ಪುತ್ರಿಗೆ ಸೋಂಕು ಪಾಸಿಟಿವ್ ಬಂದಿದೆ. ಅವರಿಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಂಟ್ವಾಳ ತಾಲೂಕಿನ ಬಿ.ಕಸಬ ಗ್ರಾಮದ ಬಂಟ್ವಾಳ ಪೇಟೆ ಎಂಬಲ್ಲಿನ ಮೂವರು ಕೊರೋನ ಸೋಂಕಿಗೆ ಬಲಿಯಾಗಿದ್ದು ಮೂವರೂ ಮಹಿಳೆಯರಾಗಿ ದ್ದಾರೆ. ಅಲ್ಲದೆ ಈ ಮೂವರು ಅಕ್ಕಪಕ್ಕದ ಮನೆಯವರಾಗಿದ್ದಾರೆ. ಎಪ್ರಿಲ್ 19ರಂದು 50 ವರ್ಷ ಪ್ರಾಯದ ಮಹಿಳೆ ಮೃತಪಟ್ಟರೆ, ಎಪ್ರಿಲ್ 23ರಂದು ಅವರ 75 ವರ್ಷ ಪ್ರಾಯದ ಅತ್ತೆ ಮೃತಪಟ್ಟಿದ್ದರು. ಗುರುವಾರ ಈ ಇಬ್ಬರ ಪಕ್ಕದ ಮನೆಯ ಮಹಿಳೆ ಮೃತಪಟ್ಟಿದ್ದಾರೆ.