ಕೊರೋನ ಜಾಗೃತಿ ಮೂಡಿಸುತ್ತಿರುವ ಶಿಲ್ಪಕಲೆಗಳು
ಮಂಗಳೂರು, ಎ.30: ಇಲ್ಲಿ ಜಾಗೋರಿನ ರಾಜರಿದ್ದಾರೆ. ಘೊಡ್ಯಾಮೊಡ್ಣಿಯ ಕುದುರೆ ಸವಾರನಿದ್ದಾನೆ. ದಮಾಮ್ ನುಡಿಸುವ, ಕುಣಿಯುವ ಸಿದ್ದಿಗಳು, ದಫ್ ನುಡಿಸುವ ದಾಲ್ದಿ, ಗುಮಟೆ ಹಾಡಿಗೆ ತಾಳ ಹಾಕುವ ಹಾಗೂ ಕೋಲಾಟ ವಾಡುವ ಕುಡುಮಿಯರು, ಬಾಯ್ಲಿ ಹಾಗೂ ಮಾಂಡೊ ಪ್ರಕಾರಗಳಿಗೆ ನರ್ತಿಸುವ ಜೋಡಿಗಳು ಇದ್ದಾರೆ. ಕೊರೋನ ಬಗ್ಗೆ ಜಾಗೃತೆ ವಹಿಸಲು ಇವರು ಮುಖಕ್ಕೆ ಮಾಸ್ಕ್ ಧರಿಸಿದ್ದಾರೆ. ಇತರರಿಗೂ ಕಾಳಜಿ ವಹಿಸಿ, ಕೊರೋನಾ ಸೋಲಿಸಿ, ಮಾಸ್ಕ್ ಧರಿಸಿ, ಜೀವ ಉಳಿಸಿ ಎಂಬ ಸಂದೇಶ ನೀಡುತ್ತಿದ್ದಾರೆ.
ಇದು ಮಂಗಳೂರಿನ ಶಕ್ತಿನಗರದಲ್ಲಿರುವ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್‌ನ ಕಲಾಂಗಣದ ಏಕತಾ ಗೋಡೆಯಲ್ಲಿ ಕಂಡು ಬಂದ ದೃಶ್ಯ. ಇಲ್ಲಿರುವ ವಿವಿಧ ಕೊಂಕಣಿ ಕಲೆ ಸಂಸ್ಕೃತಿಯ ಆಕರ್ಷಕ ಸಿಮೆಂಟ್ ಶಿಲ್ಪಕಲಾ ಪ್ರತಿಮೆಗಳು ಜನಾಕರ್ಷಣೆಯ ಕೇಂದ್ರಬಿಂದು.
ಇಲ್ಲಿಯ ಪಕ್ಕದ ಕೆಲ ಪ್ರದೇಶ ಸೀಲ್‌ಡೌನ್ ಆಗಿದೆ. ಹಾಗಾಗಿ ಈ ಶಿಲ್ಪಗಳು ಕೂಡಾ ಮಾಸ್ಕ್ ಧರಿಸಿ, ಜನರಿಗೆ ಕೋವಿಡ್-19 ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಮನೆಯಿಂದ ಹೊರ ಬರುವಾಗ ತಪ್ಪದೆ ಮಾಸ್ಕ್ ಧರಿಸುವಂತೆ ಪ್ರೇರೇಪಿಸುತ್ತಿವೆ.