ಕೊರೋನ ವಿರುದ್ಧದ ಹೋರಾಟಕ್ಕೆ ದಕ್ಷಿಣ ಕೊರಿಯಾ ಮಾದರಿ : ವಿಶ್ವಸಂಸ್ಥೆ

Update: 2020-05-01 04:16 GMT

ವಾಷಿಂಗ್ಟನ್ : ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದ ದಕ್ಷಿಣ ಕೊರಿಯಾ, ವಿಶ್ವದ ಇತರ ದೇಶಗಳಿಗೆ ಮಾದರಿ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟ್ರೆಸ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಕೊರಿಯಾ, ಕೊರೋನ ಸಾಂಕ್ರಾಮಿಕ ಸಮಸ್ಯೆಯನ್ನು ನಿಭಾಯಿಸುವಲ್ಲಿ ಹವಾಮಾನ ಬದಲಾವಣೆ ಸಮಸ್ಯೆ ಅಂಶಕ್ಕೆ ಒತ್ತು ನೀಡಿದ್ದು, ಭಾರಿ ಯಶಸ್ಸು ಸಾಧಿಸಿದೆ ಎಂದು ಗುಟ್ರೆಸ್ ಗುರುವಾರ ಮೆಚ್ಚುಗೆ ಸೂಚಿಸಿದರು. ಕೊರಿಯಾದಲ್ಲಿ ಯಾವುದೇ ಹೊಸ ಕೊರೋನ ಪ್ರಕರಣಗಳು ಇಲ್ಲ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಸಿದ ಅವರು ಮೇಲಿನಂತೆ ಹೇಳಿದರು.

ಈ ಮಧ್ಯೆ ದಕ್ಷಿಣ ಕೊರಿಯಾ, ಕೊರೋನದಿಂದ ಚೇತರಿಸಿಕೊಳ್ಳಲು ಕಲ್ಲಿದ್ದಲು ಉರಿಸುವ ಹೊಸ ಘಟಕಗಳಿಗೆ ನಿಷೇಧ ಮತ್ತು ಹಾಲಿ ಇರುವ ಕಲ್ಲಿದ್ದಲು ಉರಿಸುವ ಘಟಕಗಳಿಂದ ಹೊಗೆಯುಗುಳುವಿಕೆ ಕಡಿಮೆ ಮಾಡುವುದೂ ಸೇರಿದಂತೆ ಮಹತ್ವಾಕಾಂಕ್ಷಿ ಗ್ರೀನ್ ಡೀಲ್ ಪ್ರಸ್ತುತಪಡಿಸಿದೆ.ಕೊರಿಯಾದ ಈ ನಿದರ್ಶನವನ್ನು ವಿಶ್ವದ ಇತರ ದೇಶಗಳು ಅನುಸರಿಸಬೇಕು ಎಂದು ಗುಟ್ರೆಸ್ ಸುದ್ದಿಗೋಷ್ಠಿಯಲ್ಲಿ ಸಲಹೆ ಮಾಡಿದರು.

ಕೊರಿಯಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ಗುರುವಾರ ಹೇಳಿಕೆ ನೀಡಿ, ಕಳೆದ 24 ಗಂಟೆಗಳಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, ಇವೆಲ್ಲವೂ ಹೊರದೇಶಗಳಿಂದ ಬಂದವರಲ್ಲಿ ಪತ್ತೆಯಾಗಿದೆ ಎಂದು ತಿಳಿಸಿತ್ತು. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10765 ಅಗಿದ್ದು, 247 ಮಂದಿ ಮೃತಪಟ್ಟಿದ್ದರೆ, 9059 ಮಂದಿ ಗುಣಮುಖರಾಗಿದ್ದಾರೆ.

ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾದ ಬಳಿಕ ಇದೀಗ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಈಗಾಗಲೇ ಕೆಲ ಸುರಕ್ಷಿತ ಅಂತರ ನಿಯಮಗಳನ್ನು ಸಡಿಲಿಸಿದೆ. ಅಮೆರಿಕದಲ್ಲಿ ಮೊದಲ ಪ್ರಕರಣ ಪತ್ತೆಯಾದ ದಿನವೇ ಅಂದರೆ ಜನವರಿ 20ರಂದು ದಕ್ಷಿಣ ಕೊರಿಯಾದಲ್ಲೂ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು.

ಖಾಸಗಿ ಲ್ಯಾಬ್‌ಗಳು ಪರೀಕ್ಷಾ ಕಿಟ್‌ಗಳನ್ನು ಉತ್ಪಾದಿಸಲು ಅನುಮತಿ ನೀಡಿ, ದಿನಕ್ಕೆ 20 ಸಾವಿರ ಪರೀಕ್ಷೆಗಳನ್ನು ನಡೆಸಲು ಆರಂಭದಲ್ಲೇ ವ್ಯವಸ್ತೆ ಮಾಡಿತು. ತ್ವರಿತವಾಗಿ ರೋಗಿಗಳ ಪತ್ತೆಗಾಗಿ ಮೊಬೈಲ್ ಪರೀಕ್ಷಾ ಘಟಕಗಳನ್ನೂ ಸ್ಥಾಪಿಸಿತ್ತು. ಇದರಿಂದ ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News