ಮುದ್ರಣ ಮಾಧ್ಯಮಕ್ಕೆ 15 ಸಾವಿರ ಕೋಟಿ ರೂ.ನಷ್ಟದ ಅಂದಾಜು

Update: 2020-05-01 05:08 GMT

ಹೊಸದಿಲ್ಲಿ,ಮೇ1: ದೇಶೀಯ ಪತ್ರಿಕೋದ್ಯಮಕ್ಕೆ ಕೊರೋನ ವೈರಸ್‌ನಿಂದಾಗಿ ಎರಡು ತಿಂಗಳಲ್ಲಿ 4,500 ಕೋ.ರೂ.ನಷ್ಟವಾಗಿದ್ದು, ತಕ್ಷಣವೇ ಪರಿಹಾರ ಪ್ಯಾಕೇಜ್‌ವೊಂದನ್ನು ಘೋಷಿಸಬೇಕೆಂದು ಭಾರತೀಯ ಸುದ್ದಿಪತ್ರಿಕೆ ಸಂಘಟನೆ(ಐಎನ್‌ಎಸ್)ಇತ್ತೀಚೆಗೆ ಸರಕಾರವನ್ನು ಆಗ್ರಹಿಸಿದೆ.

ದೇಶದಲ್ಲಿ ಆರ್ಥಿಕ ಚಟುವಟಿಕೆ ಕುಸಿತವಾದ ಬಳಿಕ ಜಾಹೀರಾತು ಸಿಗುತ್ತಿಲ್ಲ. ಸರಕಾರವು ಪ್ಯಾಕೇಜ್‌ನ್ನು ತುರ್ತಾಗಿ ಘೋಷಿಸದೇ ಇದ್ದರೆ ಮುಂದಿನ ಆರು-ಏಳು ತಿಂಗಳುಗಳ ಕಾಲ ಇದೇ ರೀತಿಯ ನಷ್ಟ ಮುಂದುವರಿಯುವ ನಿರೀಕ್ಷೆಯಿದ್ದು,ಹೆಚ್ಚುವರಿ 12,000ರಿಂದ 15,000 ಕೋಟಿ ರೂ.ನಷ್ಟವಾಗಬಹುದು ಎಂದು 800ಕ್ಕೂ ಅಧಿಕ ನ್ಯೂಸ್ ಪೇಪರ್‌ಗಳನ್ನು ಪ್ರತಿನಿಧಿಸುತ್ತಿರುವ ಐಎನ್‌ಎಸ್ ತಿಳಿಸಿದೆ.

ನ್ಯೂಸ್ ಪ್ರಿಂಟ್ ಮೇಲಿನ ಶೇ.5ರಷ್ಟಿರುವ ಆಮದು ಶುಲ್ಕ ಹಾಗೂ ಎರಡು ವರ್ಷಗಳ ತೆರಿಗೆ ತೆಗೆದುಹಾಕುವುದು, ದಿನಪತ್ರಿಕೆಯನ್ನು ಉಳಿಸಲು ಹಾಗೂ ಮುಚ್ಚುವುದನ್ನು ತಪ್ಪಿಸಲು ಇಂತಹ ನಿರ್ಣಾಯಕ ಕ್ರಮಗಳ ಅಗತ್ಯವಿದೆ. ವೃತ್ತಪತ್ರಿಕೆಗಳ ವೆಚ್ಚದ ಗಮನಾರ್ಹ ಪ್ರಮಾಣವನ್ನು ಸರಕಾರ ಸಂಪೂರ್ಣ ಮನ್ನಾ ಮಾಡಬೇಕೆಂದು ಐಎನ್‌ಎಸ್ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ.

  ಇತರ ಉದ್ಯಮಗಳಿಗೆ ನೀಡುವ ಅನುದಾನದ ಪರಿಹಾರ ಜೊತೆಗೆ ಸರಕಾರವು ಮುದ್ರಣ ಮಾಧ್ಯಮ ಜಾಹೀರಾತು ದರಗಳನ್ನು ಶೇ.50ರಷ್ಟು ಹೆಚ್ಚಿಸಬೇಕು. ಅದರ ಒಟ್ಟಾರೆ ಬಜೆಟ್ ವೆಚ್ಚವನ್ನು ಶೇ.200ರಷ್ಟು ಹೆಚ್ಚಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಾಕಿ ಇರಿಸಿರುವ ಜಾಹೀರಾತು ಮೊತ್ತವನ್ನು ಪಾವತಿಸಬೇಕು ಎಂದು ಐಎನ್‌ಎಸ್ ಆಗ್ರಹಿಸಿದೆ.

ದಿನಪತ್ರಿಕೆಗಳ ಸಂಸ್ಥೆಗಳು ತನ್ನ ಉದ್ಯೋಗಿಗಳು ಹಾಗೂ ಅದನ್ನು ಅವಲಂಬಿಸಿರುವವರಿಗೆ ವೇತನಗಳನ್ನು ನೀಡಲು ಕಷ್ಟಪಡುವಂತಾಗಿದೆ ಎಂದು ಐಎನ್‌ಎಸ್ ಅಧ್ಯಕ್ಷ ಶೈಲೇಶ್ ಗುಪ್ತಾ ಹೇಳಿದ್ದಾರೆ.

ಐಎನ್‌ಎಸ್ ಅಂದಾಜಿನ ಪ್ರಕಾರ ಪತ್ರಿಕೋದ್ಯಮವು ನೇರವಾಗಿ 10 ಲಕ್ಷ ಜನರಿಗೆ ಉದ್ಯೋಗ ನೀಡುತ್ತಿದ್ದು, ಸುಮಾರು 20 ಲಕ್ಷ ಜನರು ಪರೋಕ್ಷವಾಗಿ ಇದನ್ನು ಅವಲಂಬಿಸಿದ್ದಾರೆ.

ಕೊರೋನ ವೈರಸ್ ಪಿಡುಗಿನ ಸಂದರ್ಭದಲ್ಲಿ ಜೀವ ಉಳಿಸುವ ಅಮೂಲ್ಯ ಮಾಹಿತಿಯನ್ನು ಪ್ರತಿ ಪತ್ರಿಕೆಗಳು ನೀಡುತ್ತಿವೆ. ಪತ್ರಿಕೆಗಳಿಗೆ ಸರಕಾರದ ನೆರವಿನ ಅಗತ್ಯವಿದೆ ಎಂದು ಐಎನ್‌ಎಸ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News