​ಅಣ್ಣನನ್ನು ಪಾಳುಬಾವಿಗೆ ತಳ್ಳಿ ತಂಗಿ ಮೇಲೆ ಸಾಮೂಹಿಕ ಅತ್ಯಾಚಾರ

Update: 2020-05-01 04:55 GMT

ಭೋಪಾಲ್ : ಲಾಕ್‌ಡೌನ್ ಮಧ್ಯೆ ಅಣ್ಣನ ಜತೆ ಮನೆಗೆ ಮರಳುತ್ತಿದ್ದ 18 ವರ್ಷದ ಯುವತಿಯ ಮೇಲೆ ಏಳು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಮೋಟರ್ ಸೈಕಲ್‌ಗೆ ಪೆಟ್ರೋಲ್ ಹಾಕಿಸಿಕೊಂಡು ಬರಲು ಹೊರಗೆ ಹೋಗಿದ್ದ ಅಣ್ಣ- ತಂಗಿ ವಾಪಸ್ಸಾಗುವಾಗ ಅಣ್ಣನನ್ನು ಪಾಳು ಬಾವಿಗೆ ತಳ್ಳಿ ತಂಗಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಒಬ್ಬ ಅಪ್ರಾಪ್ತ ವಯಸ್ಸಿನವ ಸೇರಿದಂತೆ ಏಳು ಮಂದಿ ಬೈಕ್ ತಡೆದು, ಅಣ್ಣನನ್ನು ಥಳಿಸಿ ಪಾಳುಬಾವಿಗೆ ತಳ್ಳಿ, ತಂಗಿಯನ್ನು ಪಕ್ಕದ ಅರಣ್ಯಕ್ಕೆ ಎಳೆದೊಯ್ದು ಒಬ್ಬರ ಬಳಿಕ ಮತ್ತೊಬ್ಬರು ಅತ್ಯಾಚಾರ ನಡೆಸಿದರು ಎನ್ನಲಾಗಿದೆ. ಯುವತಿಯನ್ನು ಅಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ರಾತ್ರಿಯಾದರೂ ಅಣ್ಣ-ತಂಗಿ ಮನೆಗೆ ಬಾರದಿದ್ದಾಗ ಗ್ರಾಮಸ್ಥರು ಹುಡುಕಾಟ ಆರಂಭಿಸಿದರು. ಅಂತಿಮವಾಗಿ ಇಬ್ಬರನ್ನೂ ಪತ್ತೆ ಮಾಡಲಾಯಿತು. ಇಬ್ಬರಿಗೂ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ಎಸ್ಪಿ ಡಿ.ಎಸ್. ಭಡೂರಿಯಾ ಹೇಳಿದ್ದಾರೆ.

ಈ ಸಂಬಂಧ ಐದು ಮಂದಿಯನ್ನು ಬಂಧಿಸಲಾಗಿದ್ದು, ಇಬ್ಬರಿಗಾಗಿ ಶೋಧ ನಡೆದಿದೆ ಎಂದು ಅವರು ವಿವರಿಸಿದ್ದಾರೆ. ವಾರದ ಹಿಂದಷ್ಟೇ ಆರು ವರ್ಷದ ಬಾಲಕಿಯನ್ನು ಅದೇ ಗ್ರಾಮದ ಯುವಕ ಅಪಹರಿಸಿ ಅತ್ಯಾಚಾರ ಎಸಗಿ ಕಣ್ಣು ಕಿತ್ತ ಭೀಕರ ಘಟನೆ ದಮೋಹ್ ಜಿಲ್ಲೆಯಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News