ಚೀನಾದಿಂದ ಕೊರೋನ ಕಿಟ್ ಆಮದು ಮಾಡಿಕೊಂಡವರಿಗೆ ಡಿಸಿಜಿಐ ನೋಟಿಸ್

Update: 2020-05-01 05:06 GMT
ಫೈಲ್ ಫೋಟೊ 

ಹೊಸದಿಲ್ಲಿ : ಚೀನಾದ ಗಂಗ್ಝು ವೊಂಡ್ಫೊ ಮತ್ತು ಝುಹೈ ಲಿವ್‌ಝಾನ್ ಕಂಪನಿಗಳಿಂದ ತ್ವರಿತ ಕೊರೋನ ಪರೀಕ್ಷಾ ಕಿಟ್‌ಗಳನ್ನು ಆಮದು ಮಾಡಿಕೊಂಡ ಕಂಪನಿಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಶೋಕಾಸ್ ನೋಟಿಸ್ ನೀಡಿದ್ದಾರೆ.

ಈ ಪರೀಕ್ಷಾ ಕಿಟ್‌ಗಳ ಮೂಲಕ ಪ್ರಕರಣಗಳ ಪರೀಕ್ಷೆ ನಡೆಸಿದಾಗ ಫಲಿತಾಂಶ ನಿಖರವಾಗಿ ಬರುತ್ತಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಪತ್ತೆ ಮಾಡಿದ ಹಿನ್ನೆಲೆಯಲ್ಲಿ ಡಿಸಿಜಿಐ ಈ ನೋಟಿಸ್ ನೀಡಿದೆ.

ಕೋವಿಡ್-19 ಸರ್ವೇಕ್ಷಣೆಯನ್ನು ಹೆಚ್ಚಿಸುವ ಸಲುವಾಗಿ ಕೇವಲ ಎರಡು ದಿನಗಳಲ್ಲಿ 5.5 ಲಕ್ಷ ಕಿಟ್‌ಗಳನ್ನು ವಿವಿಧ ರಾಜ್ಯಗಳಿಗೆ ವಿತರಿಸಲಾಗಿತ್ತು. ಬಳಿಕ ಈ ದೋಷಯುಕ್ತ ಕಿಟ್‌ಗಳನ್ನು ವಾಪಾಸು ಮಾಡುವಂತೆ ರಾಜ್ಯಗಳಿಗೆ ಸೂಚಿಸಿತ್ತು. ಇವುಗಳನ್ನು ಪೂರೈಕೆದಾರರಿಗೆ ವಾಪಾಸು ಮಾಡುವುದಾಗಿಯೂ ಐಸಿಎಂಆರ್ ಸ್ಪಷ್ಟಪಡಿಸಿತ್ತು.

ಈ ಮಧ್ಯೆ ದೇಶದಲ್ಲಿ ಕೊರೋನ ಸ್ಥಿತಿ ಸುಧಾರಿಸುತ್ತಿದ್ದು, ಪ್ರಕರಣ ದ್ವಿಗುಣಗೊಳ್ಳುತ್ತಿದ್ದ ಕಾಲಾವಧಿ 3.4 ದಿನಗಳ ಬದಲು ಇದೀಗ 11 ದಿನಗಳಿಗೆ ಹೆಚ್ಚಿದೆ. ಸೋಂಕಿತರ ಪೈಕಿ ಸಾವಿನ ಪ್ರಮಾಣ ಶೇಕಡ 3.2ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್ ಹೇಳಿದ್ದಾರೆ.

ಕರ್ನಾಟಕ, ಲಡಾಖ್, ಹರ್ಯಾಣ, ಉತ್ತರಾಖಂಡ, ಕೇರಳ ಮತ್ತಿತರ ರಾಜ್ಯಗಳಲ್ಲಿ ಪ್ರಕರಣಗಳು ದ್ವಿಗುಣಗೊಳ್ಳುವ ಕಾಲಾವಧಿ 20-40 ದಿನಗಳಾಗಿವೆ ಎಂದು ವಿವರಿಸಿದರು. ಅಸ್ಸಾಂ (59), ತೆಲಂಗಾಣ (70.8), ಛತ್ತೀಸ್‌ಗಢ (87.7), ಹಿಮಾಚಲ ಪ್ರದೇಶ (191.2) ರಾಜ್ಯಗಳಲ್ಲಿ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News