ವಲಸೆ ಕಾರ್ಮಿಕರನ್ನು ಹೊತ್ತ ಮೊದಲ ವಿಶೇಷ ರೈಲು ತೆಲಂಗಾಣದಿಂದ ಜಾರ್ಖಂಡ್‌ನತ್ತ ಪಯಣ
ಹೊಸದಿಲ್ಲಿ, ಮೇ 1: ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಯಾದ ಬಳಿಕ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಹೊತ್ತ ಮೊದಲ ವಿಶೇಷ ರೈಲು ತೆಲಂಗಾಣದಿಂದ ಜಾರ್ಖಂಡ್‌ಗೆ ಶುಕ್ರವಾರ ಬೆಳಗ್ಗೆ ಹೊರಟಿದೆ.
ವೈರಸ್ ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಯಾದ ಸುಮಾರು ಐದು ವಾರಗಳ ಬಳಿಕ ಕೊರೋನ ವೈರಸ್ ಲಕ್ಷಣ ಕಾಣಿಸದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಇತರರಿಗೆ ತಮ್ಮ ಮನೆಗೆ ವಾಪಸಾಗಲು ಕೇಂದ್ರ ಸರಕಾರ ಅನುಮತಿ ನೀಡಿದ ಮರುದಿನವೇ ತೆಲಂಗಾಣ ರಾಜ್ಯ ಸರಕಾರವು ರೈಲಿನಲ್ಲಿ ಕಾರ್ಮಿಕರನ್ನು ಕಳುಹಿಸಿಕೊಟ್ಟಿದೆ.
ಕೇಂದ್ರ ಸರಕಾರದ ಆದೇಶದ ಬಳಿಕ ಪಂಜಾಬ್, ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಕೆಲವು ದಕ್ಷಿಣ ರಾಜ್ಯಗಳು ವಲಸಿಗರ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ರೈಲು ಸೇವೆ ಒದಗಿಸಲ ಆಗ್ರಹಿಸಿದ್ದವು. ಬಸ್‌ಗಳ ಮೂಲಕ ಕಾರ್ಮಿಕರನ್ನು ಕಳುಹಿಸಲು ಸಾಧ್ಯವಾಗದ ಕಾರಣ ರೈಲು ಒದಗಿಸುವಂತೆ ಕೇಳಿಕೊಂಡಿವೆ. ರಸ್ತೆ ಮಾರ್ಗದ ಮೂಲಕ ಪ್ರಯಾಣಿಸಬಹುದಾದ ಸ್ಥಳಕ್ಕೆ ರಾಜ್ಯ ಸರಕಾರವೇ ಸಾರಿಗೆ ವ್ಯವಸ್ಥೆ ಮಾಡಬೇಕೆಂದು ರಾಜ್ಯಗಳಿಗೆ ಕೇಂದ್ರ ಆದೇಶಿಸಿದೆ.
ಮಾ.25ರಂದು ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದ ಬಳಿಕ ಲಕ್ಷಾಂತರ ವಲಸಿಗ ಕಾರ್ಮಿಕರು ಅಲ್ಲಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.