×
Ad

ತೀವ್ರ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನಿರಾಕರಿಸುತ್ತಿರುವ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಎಸ್‌ಡಿಪಿಐ ಒತ್ತಾಯ

Update: 2020-05-01 13:21 IST

ಮಂಗಳೂರು, ಮೇ 1: ತೀವ್ರ ಆರೋಗ್ಯ ಸಮಸ್ಯೆ ಇರುವ ರೋಗಿಗಳಿಗೆ ಕೋರೋನ ನೆಪದಲ್ಲಿ ಚಿಕಿತ್ಸೆ ನಿರಾಕರಿಸುವುದು, ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗ ಹಾಕುವುದು ರಾಜ್ಯಾದ್ಯಂತ ವರದಿಯಾಗುತ್ತಿದೆ. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಆತಂಕವನ್ನು ಸೃಷ್ಟಿಸಿದೆ.

ಸಾಂಕ್ರಾಮಿಕ ರೋಗಕ್ಕಿಂತಲೂ ಹೆಚ್ಚಾಗಿ ಜನರು ಇಂತಹ ಆತಂಕಕಾರಿ ಸ್ಥಿತಿಯ ಬಗ್ಗೆ ಭಯಪಟ್ಟುಕೊಂಡಿದ್ದಾರೆ. ಅನಾರೋಗ್ಯ ಪೀಡಿತರ ಜೀವವನ್ನು ಉಳಿಸಲು ವೈದ್ಯಕೀಯ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನವನ್ನು ರಾಜ್ಯ ಸರಕಾರ ನೀಡಬೇಕು ಮತ್ತು ಸಾರ್ವಜನಿಕರಿಂದ ದೂರು ಸ್ವೀಕರಿಸಿ ಕ್ರಮಕೈಗೊಳ್ಳಲು ಪ್ರತೀ ಜಿಲ್ಲೆಗಳಲ್ಲಿ ಪ್ರತ್ಯೇಕ ಮೆಡಿಕಲ್ ಕಮಿಷನ್ ನೇಮಿಸಬೇಕು ಎಂದು ಎಸ್‌ಡಿಪಿಐ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಗ್ರಹಿಸಿದ್ದಾರೆ.

ಹಲವು ವರ್ಷಗಳಿಂದ ಉಸಿರಾಟದ ಅಥವಾ ಶ್ವಾಸಕೋಶದ ಸಮಸ್ಯೆ ಇದ್ದು ನಿರಂತರವಾಗಿ ಶುಶ್ರೂಷೆ ಪಡೆಯುತ್ತಿರುವವರಿಗೆ ಆಸ್ಪತ್ರೆಗಳು ಚಿಕಿತ್ಸೆ ನೀಡದಿರುವುದು, ನ್ಯೂಮೋನಿಯಾದಿಂದ ಬಳಲುತ್ತಿರುವವರಿಗೆ ತಕ್ಷಣವೇ ಚಿಕಿತ್ಸೆ ನೀಡಲು ನಿರಾಕರಿಸುತ್ತಿರುವುದು, ರೋಗಿಗಳನ್ನು ಕೋವಿಡ್ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವ ಆಂಬುಲೆನ್ಸ್ಗಳಲ್ಲಿ ವೆಂಟಿಲೇಟರ್ ಇಲ್ಲದಿರುವುದು, ಪರೀಕ್ಷೆಯ ವರದಿಗಾಗಿ ಎರಡು ದಿನಗಳವರೆಗೆ ಕಾಯುತ್ತಾ ಚಿಕಿತ್ಸೆ ನೀಡದಿರುವುದು ಸಾಮಾನ್ಯವಾಗಿದೆ. ಇದರಿಂದ ಕೆಲವು ಸಾವುಗಳು ಸಂಭವಿಸಿದ ಘಟನೆಗಳು ವರದಿಯಾಗಿವೆ. ಇಂತಹ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯ ಘಟನೆಗಳಿಂದ ಜನರು ತೀರಾ ಆತಂಕಕ್ಕೀಡಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರೋಗಿಗಳನ್ನು ದಾಖಲಿಸಲು ಖಾಸಗಿ ಆಸ್ಪತ್ರೆಗಳು ಹಿಂಜರಿಯುತ್ತಾ ಸರಕಾರಿ ಆಸ್ಪತ್ರೆಗಳಿಗೆ ಸಾಗಹಾಕುವುದು ಹಾಗೂ ಅಲ್ಲಿಂದ ಮತ್ತೆ ಮೆಡಿಕಲ್ ಕಾಲೇಜುಗಳಿಗೆ ಕಳುಹಿಸಿಕೊಡುವುದರಿಂದ ರೋಗಿಗಳಿಗೂ ಉಪಚಾರಕರಿಗೂ ಭಾರೀ ಮಾನಸಿಕ ಹಿಂಸೆಯಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಉಪಚಾರಕರನ್ನು ಸಾಮಾನ್ಯ ಕೊಠಡಿಗಳಲ್ಲಿ ತುಂಬಿಸಿ ಅತ್ಯಂತ ಕಳಪೆ ಆಹಾರವನ್ನು ಒದಗಿಸುತ್ತಿರುವುದು ಕೂಡಾ ತೀರಾ ಶೋಚನೀಯವಾಗಿದೆ.

ರಾಜ್ಯದ ಹಲವು ಜಿಲ್ಲೆಗಳಿಂದ ಇಂತಹ ಘಟನೆಗಳು ವರದಿಯಾಗುತ್ತಿದೆ. ಕೊರೋನ ಸಾಂಕ್ರಾಮಿಕಕ್ಕಿಂತಲೂ ಹೆಚ್ಚಾಗಿ ಇಂತಹ ಜೀವ ಹಿಂಡುವ ಗಂಭೀರ ಪರಿಸ್ಥಿತಿಯನ್ನು ನಿರ್ಮಿಸಿದ ಸನ್ನಿವೇಶದಲ್ಲಿ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ಈ ಪರಿಸ್ಥಿತಿಯ ಹೊಣೆಗಾರರನ್ನಾಗಿಸಬೇಕೆಂದೂ ರಾಜ್ಯ ಸರಕಾರವನ್ನು ಅಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News