×
Ad

ದ.ಕ.: ಮನೆಗಳಲ್ಲೇ ಮೇ ದಿನ ಆಚರಿಸಿದ ಕಾರ್ಮಿಕರು

Update: 2020-05-01 18:01 IST

ಮಂಗಳೂರು, ಮೇ 1: ಕೊರೋನ ಸೋಂಕು ರೋಗ ತಡೆಗಟ್ಟುವ ಸಲುವಾಗಿ ಲಾಕ್‌ಡೌನ್ ವಿಧಿಸಲ್ಪಟ್ಟ ಕಾರಣ ಜಿಲ್ಲೆಯ ಬಹುತೇಕ ಕಡೆ ಕಾರ್ಮಿಕರು ಸ್ವತಃ ಮನೆಗಳಲ್ಲೇ ಶುಕ್ರವಾರ ಮೇ ದಿನ ಆಚರಿಸಿದರು.

ಸಾಮಾನ್ಯವಾಗಿ ಸಾರ್ವಜನಿಕವಾಗಿ ಮೇ ದಿನ ಆಚರಿಸುವ ಕಾರ್ಮಿಕರು, ಸಂಘಟನೆಗಳ ಮುಖಂಡರು ಈ ಬಾರಿ ವಿಶಿಷ್ಟವಾದ ರೀತಿಯಲ್ಲಿ ಆಚರಿಸಿ ಗಮನ ಸೆಳೆದರು.

ಕಾರ್ಮಿಕ ನಾಯಕರಾದ ಜಯರಾಮ ಮಯ್ಯ, ಶ್ಯಾಮರಾಜ್, ಲೋಕೇಶ್ ಕುದ್ಯಾಡಿ, ದೇವಕಿ, ಲಕ್ಷ್ಮಣ ಗೌಡ, ಜಯಶ್ರೀ, ನೆಬಿಸಾ, ಪುಷ್ಪಾ, ಡೊಂಬಯ ಗೌಡ, ಮಂಜುನಾಥ್, ನಾರಾಯಣ, ಶೇಖರ ವೇಣೂರು, ಸಂಜೀವ ನಾಯ್ಕ, ಮುಹಮ್ಮದ್ ಅನಸ್, ಈಶ್ವರಿ, ಕೇಶವ ಗೌಡ, ಈಶ್ವರಿ, ಧನಂಜಯ ಗೌಡ, ರಾಮಚಂದ್ರ ವಸಂತ ಟೈಲರ್ ಮನೆಗಳಲ್ಲೇ ಮೇ ದಿನ ಆಚರಿಸಿದರು.

ಈ ಮಧ್ಯೆ ಹಿರಿಯ ಕಮ್ಯುನಿಸ್ಟ್ ನಾಯಕ, ನ್ಯಾಯವಾದಿ ಬಿ.ಎಂ.ಭಟ್ ಕಾರ್ಮಿಕ ವರ್ಗಕ್ಕೆ ಸ್ವಾತಂತ್ರ್ಯದ ದಾರಿ ತೋರಿಸಿದ ಮರೆಯಲಾಗದ ದಿನವಿದು. ಕಾರ್ಮಿಕರು ಕೆಂಬಾವುಟ ಹಿಡಿದು ಶೋಷಣೆ ವಿರುದ್ಧ ಹೋರಾಡುವ ಪ್ರತಿಜ್ಞೆಗೈಯಬೇಕು. ಕೆಂಬಾವುಟದ ಮಹತ್ವವನ್ನು ಜಗತ್ತಿಗೆ ಸಾರಬೇಕು. ವಿಶ್ವದ ಎಲ್ಲಾ ಕಾರ್ಮಿಕರು ಒಂದಾಗಿ ಸಾಮ್ರಾಜ್ಯಶಾಹಿಗೆ, ಕೋಮುವಾದಕ್ಕೆ ದಿಕ್ಕಾರ ಕೂಗಿದ ಈ ದಿನ ಕೊರೋನ ವೈರಸ್ ವಿರುದ್ಧವೂ ಹೋರಾಟ ಮುಂದುವರಿಸಬೇಕು. ಪರಿಸರ ಸಂರಕ್ಷಣೆ ಜೊತೆಗೆ ಕನಿಷ್ಟ ವೇತನ ಜಾರಿಗಾಗಿ, ಬಾಕಿ ಇರುವ ವೇತನ, ಡಿ.ಎ., ಗ್ರಾಚ್ಯುಟಿ ಪಡೆಯಲಿಕ್ಕಾಗಿ ಹೋರಾಟ ಮುಂದುವರಿಸಬೇಕು ಎಂದರು.

ಕೊರೋನ ವೈರಸ್ ತಡೆಯುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಲಾಕ್‌ಡೌನ್ ಜೊತೆಗೆ ಜನರು ಹಸಿವೆಯಿಂದ ನರಳದಂತೆ ನೋಡಿಕೊಳ್ಳುವುದು, ಬೆಲೆ ಏರಿಕೆಗೆ ಕಡಿವಾಣ ಹಾಕುವುದು ಸರಕಾರದ ಕರ್ತವ್ಯವಾಗಿತ್ತು. ಇದರಲ್ಲಿ ಸರಕಾರ ಎಡವಿದೆ. ಜನವರಿಯಿಂದಲೇ ಕೊರೋನ ವಿರುದ್ದ ಹೋರಾಟ ಆರಂಭಿಸಿದ್ದರೆ ಭಾರತಕ್ಕೆ ಇಂದು ಈ ಸಂಕಷ್ಟ ಬರುತ್ತಿರಲಿಲ್ಲ ಎಂದ ಬಿಎಂ ಭಟ್ ಬಿಸಿಯೂಟ, ಅಂಗನವಾಡಿ ಅಟೋ ಮತ್ತಿತರ ವಾಹನಗಳ ಚಾಲಕರು, ಕಟ್ಟಡ, ಕೃಷಿಕೂಲಿ, ಬೀಡಿ ಕಾರ್ಮಿಕರಿಗೆ ಸರಕಾರ ಉಚಿತ ಪ್ಯಾಕೇಜು ನೀಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News