ವಲಸಿಗ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ವಿಶೇಷ ರೈಲು: ಕೇರಳದಿಂದ ಇಂದು ಐದು ರೈಲುಗಳ ಸಂಚಾರ
ಹೊಸದಿಲ್ಲಿ, ಮೇ 2: ಕೊರೋನ ವೈರಸ್ ಲಾಕ್‌ಡೌನ್‌ನಿಂದ ದೇಶಾದ್ಯಂತ ಸಿಲುಕಿರುವ ವಲಸಿಗ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಇತರರನ್ನು ಹೊತ್ತುಕೊಂಡ ಆರು ಶ್ರಮಿಕ್(ಕಾರ್ಮಿಕರ)ವಿಶೇಷ ರೈಲುಗಳು ಶುಕ್ರವಾರ ಕೇರಳ, ತೆಲಂಗಾಣ, ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ನಿರ್ಗಮಿಸಿವೆ.
ಆಯಾ ರಾಜ್ಯಗಳ ಕೋರಿಕೆಗಳ ಮೇರೆಗೆ ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ,ಉತ್ತರಪ್ರದೇಶ ಹಾಗೂ ಬಿಹಾರಕ್ಕೆ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ರೈಲ್ವೆ ಇಲಾಖೆ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಕೋವಿಡ್-19 ಸೋಂಕಿನ ಗುಣ ಲಕ್ಷಣ ತೋರ್ಪಡಿಸದ ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್‌ನಿಂದಾಗಿ ಸಿಲುಕಿರುವ ವಲಸಿಗರಿಗೆ ಸರಕಾರ ಪ್ರಯಾಣಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಶ್ರಮಿಕ್ ವಿಶೇಷ ರೈಲುಗಳು ಸಂಚರಿಸಲಿವೆ.
ಸರಕಾರ ಆರಂಭದಲ್ಲಿ ರಸ್ತೆ ಮುಖಾಂತರ ಮಾತ್ರ ಪ್ರಯಾಣಿಸಲು ಅನುಮತಿ ನೀಡಿತ್ತು. ಬಸ್‌ನಲ್ಲಿ ನೂರಾರು ಕಿ.ಮೀ.ದೂರ ಲಕ್ಷಾಂತರ ಜನರನ್ನು ಸಾಗಿಸುವುದು ರಾಜ್ಯಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಹೀಗಾಗಿ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಪ್ರಯಾಣಿಕರಿಗೆ ಸ್ಕ್ರೀನಿಂಗ್ ಪರೀಕ್ಷೆ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವ ಕುರಿತು ಕಠಿಣ ನಿಯಮ ಪಾಲಿಸುವಂತೆ ಕೇಂದ್ರ ಸರಕಾರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.