×
Ad

ಬೈಂದೂರಿನಲ್ಲಿ ಕೊರೋನ ಪಾಸಿಟಿವ್ ವದಂತಿ: ಸ್ಥಳೀಯರಲ್ಲಿ ಆತಂಕ

Update: 2020-05-02 13:20 IST

ಉಡುಪಿ, ಮೇ 2: ಕೇಂದ್ರ ಸರಕಾರ ಇತ್ತೀಚೆಗೆ ಕೋವಿಡ್-19ಗೆ ಸಂಬಂಧಿಸಿ ಅನುಷ್ಠಾನಗೊಳಿಸಿರುವ ಆರೋಗ್ಯ ಸೇತು ಆ್ಯಪ್‌ನಿಂದ ಆದ ಗೊಂದಲದಿಂದಾಗಿ ಬೆಳಗಾವಿಯಿಂದ ಬಂದ ಬೈಂದೂರಿನ ವ್ಯಕ್ತಿಯೊಬ್ಬರಲ್ಲಿ ಕೊರೋನ ಪಾಸಿಟಿವ್ ವದಂತಿ ಹಬ್ಬಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.

ಬೈಂದೂರಿನ ಕಳವಾಡಿಯ ವ್ಯಕ್ತಿಯೊಬ್ಬರು ಬೆಳಗಾವಿಯಲ್ಲಿ ಕೊರೋನ ವೈರಸ್ ಸಂಬಂಧ ಗಂಟಲ ದ್ರವ ಪರೀಕ್ಷೆ ನಡೆಸಿ, ವರದಿ ನೆಗೆಟಿವ್ ಬಂದ ಬಳಿಕ ಮೇ 1ರಂದು ತಮ್ಮ ಊರಿಗೆ ಬಂದಿದ್ದರು. ಆದರೆ ಆರೋಗ್ಯ ಸೇತು ಆ್ಯಪ್‌ನಲ್ಲಿ ಈ ವ್ಯಕ್ತಿಯ ವರದಿ ಪಾಸಿಟಿವ್ ಎಂಬುದಾಗಿ ಅಪ್‌ಲೋಡ್ ಮಾಡಲಾಗಿತ್ತು.

ಇದರಿಂದಾಗಿ ಪಾಸಿಟಿವ್ ಇರುವ ವ್ಯಕ್ತಿ ಬೈಂದೂರಿನಲ್ಲಿದ್ದಾರೆ ಎಂಬ ಮಾಹಿತಿ ಈ ಆ್ಯಪ್‌ನಿಂದ ನೀಡಲಾಗುತ್ತಿತ್ತು. ಇದರಿಂದ ಈ ಬಗ್ಗೆ ವದಂತಿಗಳು ಹಬ್ಬಿ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಠಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿ ಬೈಂದೂರು ತಾಲೂಕು ಆಸ್ಪತ್ರೆಗೆ ತೆರಳಿದ್ದು, ಅಲ್ಲಿನ ವೈದ್ಯಾಧಿಕಾರಿಗಳು ಈ ವ್ಯಕ್ತಿ ಬಗ್ಗೆ ಬೆಳಗಾವಿ ಆರೋಗ್ಯ ಇಲಾಖೆಯಲ್ಲಿ ವಿಚಾರಿಸಿದರು. ಅವರ ನೀಡಿದ ಮಾಹಿತಿಯಂತೆ ಈ ವ್ಯಕ್ತಿಯ ಪರೀಕ್ಷೆಯ ವರದಿ ನೆಗೆಟಿವ್ ಎಂಬುದು ಖಾತ್ರಿಯಾಯಿತು.

ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಆ ವ್ಯಕ್ತಿಯನ್ನು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಐಸೋಲೇಶನ್‌ನಲ್ಲಿ ಇರಿಸಲಾಗಿದ್ದು, ಅವರ ಗಂಟಲು ದ್ರವವನ್ನು ಮತ್ತೊಮ್ಮೆ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸುವ ಸಿದ್ಧತೆಗಳು ನಡೆಯುತ್ತಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಈ ಬಗ್ಗೆ ಯಾರು ಕೂಡ ಆತಂಕಪಡುವ ಅಗತ್ಯ ಇಲ್ಲ ಎಂದು ಇಲಾಖೆಯ ವೈದ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News