ವಿದೇಶದಲ್ಲಿರುವ ಕರಾವಳಿಗರನ್ನು ಕರೆತರಲು ಸಿದ್ಧತೆ
ಮಂಗಳೂರು, ಮೇ 2: ವಿದೇಶಗಳಲ್ಲಿರುವ ಕರಾವಳಿ ಜಿಲ್ಲೆಗಳ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರನ್ನು ಭಾರತಕ್ಕೆ ಕರೆ ತರುವ ಪ್ರಕ್ರಿಯೆ ಆರಂಭಗೊಂಡಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೂರ್ವಭಾವಿ ಸಿದ್ಧತೆಗೆ ದ.ಕ. ಜಿಲ್ಲಾಡಳಿತಕ್ಕೆ ಕೇಂದ್ರ ಸರಕಾರ ಸೂಚನೆ ನೀಡಿದೆ.
ಪ್ರಥಮ ಹಂತದಲ್ಲಿ ಕರ್ನಾಟಕ್ಕೆ ಆಗಮಿಸಲಿರುವ 6,100ರಲ್ಲಿ ನಾಲ್ಕು ಸಾವಿರ ಮಂದಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ಅವರನ್ನು ಕ್ವಾರಂಟೈನ್‌ಗೊಳಪಡಿಸುವ ಕುರಿತಂತೆಯೂ ಸಿದ್ಧತೆಗಳು ನಡೆಸಲಾಗುತ್ತಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲೇ ಅಷ್ಟು ಮಂದಿಗೆ ಕ್ವಾರಂಟೈನ್ ವ್ಯವಸ್ಥೆ ಕಷ್ಟವಾಗಿರುವುದರಿಂದ ಉಡುಪಿ, ಕೊಡಗು ಸಹಿತ ಇತರ ಜಿಲ್ಲೆಯವರನ್ನು ನೇರ ಜಿಲ್ಲೆಗೆ ಕಳುಹಿಸಿ ಕ್ವಾರಂಟೈನ್ ವ್ಯವಸ್ಥೆ ಮಾಡಲು ಇಂದು ಮುಖ್ಯಮಂತ್ರಿಗೆ ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ವೀಡಿಯೊ ಕಾನ್ಫರೆನ್ಸ್‌ನಲ್ಲೂ ಮನವಿ ಮಾಡಿದ್ದಾರೆನ್ನಲಾಗಿದೆ.
ಈ ನಡುವೆ, ವಿದೇಶದಿಂದ ಆಗಮಿಸುವವರು ನೇರವಾಗಿ ಮನೆಗೆ ಹೋಗುವಂತಿಲ್ಲ. ಅವರನ್ನು ಮೂರು ವಿಭಾಗಗಳಲ್ಲಿ ವರ್ಗೀಕರಿಸಲು ಸೂಚನೆ ನೀಡಲಾಗಿದೆ. ಅದರಂತೆ ತಪಾಸಣೆ ಸಂದರ್ಭ ಕೋವಿಡ್ ಲಕ್ಷಣ ಕಂಡುಬಂದವರನ್ನು ‘ಎ’ ಕೆಟಗರಿಗೊಳಪಡಿಸಿ ಅವರ ಗಂಟಲದ್ರವ ಪರೀಕ್ಷೆ ನಡೆಸಬೇಕು. ಪಾಸಿಟಿವ್ ಪತೆಯಾದಲ್ಲಿ ಅವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಬೇಕು.
ಕೋವಿಡ್ ಲಕ್ಷಣ ಇಲ್ಲದಿರುವ ಹಾಗೂ ಅಸ್ವಸ್ಥತೆಯಿಂದ ಬಳಲಿದ 60 ವರ್ಷ ಮೇಲ್ಪಟ್ಟವರನ್ನು ಬಿ ಕೆಟಗರಿಗೊಳಪಡಿಸಿ ಅವರಿಗೆ ವೈದ್ಯಕೀಯ ನಿಗಾದೊಂದಿಗೆ ಪ್ರತ್ಯೇಕವಾಗಿ ಕ್ವಾರಂಟೈನ್ ವ್ಯವಸ್ಥೆಗೊಳಪಡಿಸಬೇಕು. ಆರೋಗ್ಯವಂತರಾಗಿರುವ 60 ವರ್ಷ ಕೆಳಗಿನವರನ್ನು ಸಿ ಕೆಟಗರಿಯಡಿ ಬೇರ್ಪಡಿಸಿ ಕೋವಿಡ್ ಕೇರ್ ಸೆಂಟರ್ (ಹೊಟೇಲ್ ಅಥವಾ ಹಾಸ್ಟೆಲ್)ಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಹಡಗುಗಳ 557 ಸಿಬ್ಬಂದಿ ಸಹಿತ ಕೆಲವರು ಹಡಗಿನ ಮೂಲಕ ಆಗಮಿಸುವ ಕಾರಣ ಮಂಗಳೂರು ಹಾಗೂ ಕಾರವಾರ ಬಂದರುಗಳಲ್ಲಿ ಸೂಕ್ತ ಸಿದ್ಧತೆ ನಡೆಸಲು ದ.ಕ. ಮತ್ತು ಉ.ಕ. ಜಿಲ್ಲಾಡಳಿತಗಳಿಗೂ ಕೇಂದ್ರ ಸರಕಾರ ಸೂಚನೆ ನೀಡಿದೆ.
ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣ, ಕಾರವಾರ ಮತ್ತು ಮಂಗಳೂರು ಬಂದರು ಹೊರತುಪಡಿಸಿ ದೇಶದ ಇತರ ಬಂದರಿಗೆ ವಿದೇಶದಿಂದ ಆಗಮಿಸಿದ ಬಳಿಕ ರಸ್ತೆ ಮೂಲಕ ಕರ್ನಾಟಕಕ್ಕೆ ಬರುವವರನ್ನೂ ಕ್ವಾರಂಟೈನ್‌ಗೆ ಒಳಪಡಿಸಲು ಸೂಚನೆ ನೀಡಲಾಗಿದೆ.
ಪ್ರಥಮ ಹಂತದಲ್ಲಿ ಕರ್ನಾಟಕಕ್ಕೆ ಕೆನಡದಿಂದ 328, ಯುಎಸ್‌ಎಯಿಂದ 927, ಯುಎಇಯಿಂದ 2575, ಖತರ್‌ನಿಂದ 414 ಹಾಗೂ ಸೌದಿ ಅರೇಬಿಯಾದಿಂದ 927 ಮಂದಿಯನ್ನು ಕರೆತರಲು ನಿರ್ಧರಿಸಲಾಗಿದೆ