×
Ad

ಕಾರ್ಮಿಕರ ಹೊರತು ಉಳಿದವರಿಗೆ ಅಂತರ್‌ರಾಜ್ಯ ಓಡಾಟಕ್ಕೆ ಅವಕಾಶ ಇಲ್ಲ: ಉಡುಪಿ ಡಿಸಿ ಸ್ಪಷ್ಟನೆ

Update: 2020-05-02 13:56 IST

ಉಡುಪಿ, ಮೇ 2: ಕೂಲಿ ಕಾರ್ಮಿಕರು ಹಾಗೂ ಪ್ರವಾಸಿಗರನ್ನು ಹೊರತು ಪಡಿಸಿ ಉಳಿದ ಯಾರಿಗೂ ಕೂಡ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗಲು ಸರಕಾರ ಅವಕಾಶ ಮಾಡಿಕೊಟ್ಟಿಲ್ಲ. ಆದುದರಿಂದ ಯಾರು ಕೂಡ ಪಾಸ್‌ಗಾಗಿ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗಳಿಗೆ ಬರುವ ಕೆಲಸ ಮಾಡಬಾರದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಸರಕಾರದಿಂದ ಕೂಲಿ ಕಾರ್ಮಿಕರು ಹಾಗೂ ಪ್ರವಾಸಿಗರನ್ನು ಮಾತ್ರ ಅವರವರ ರಾಜ್ಯಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅದೇ ರೀತಿ ಆರೋಗ್ಯ ಸಮಸ್ಯೆ ಇದ್ದವರಿಗೆ ಬೇರೆ ರಾಜ್ಯಗಳಿಗೆ ಹೋಗಲು ಜಿಲ್ಲಾಡಳಿತವು ತಾಲೂಕು ಕಚೇರಿ ಮೂಲಕ ಮಂಜೂರು ಮಾಡುವ ಪಾಸ್ ಪಡೆಯಬೇಕು. ಉಳಿದಂತೆ ಯಾರಿಗೂ ಒಂದು ರಾಜ್ಯಗಳಿಂದ ಇನ್ನೊಂದು ರಾಜ್ಯಕ್ಕೆ ಓಡಾಡಲು ಸದ್ಯ ಅವಕಾಶ ನೀಡುವುದಿಲ್ಲ ಎಂದರು.

ಹೊರರಾಜ್ಯಕ್ಕೆ ಹೋಗುವ ಕೂಲಿ ಕಾರ್ಮಿಕರು, ಪ್ರವಾಸಿಗರು ಆನ್‌ಲೈನ್ (ಛಿಜ್ಞಿಜ್ಠ.ಚ್ಟ್ಞಠಿ.ಜಟ.ಜ್ಞಿ) ಮೂಲಕ ಅರ್ಜಿ ಸಲ್ಲಿಸಬೇಕು. ಅದೇರೀತಿ ಕರ್ನಾಟಕ ರಾಜ್ಯಕ್ಕೆ ಬೇರೆ ರಾಜ್ಯದಿಂದ ವಾಪಸ್ ಬರಲು ಇಚ್ಛಿಸುವವರು ಕೂಡ ಇದೇ ರೀತಿ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ.

ಅರ್ಜಿ ಹಾಕಿದ ನಂತರ ರಾಜ್ಯ ಸರಕಾರ ಸಂಬಂಧಪಟ್ಟ ರಾಜ್ಯದೊಂದಿಗೆ ಸಂರ್ಪಕ ಮಾಡಿಕೊಂಡು, ಅವರನ್ನು ಯಾವ ರೀತಿ ಕಳುಹಿಸಬೇಕು ಮತ್ತು ಕರೆಸಿಕೊಳ್ಳಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡುತ್ತದೆ ಎಂದರು.

ಲಾಕ್‌ಡೌನ್ ಈ ಹಿಂದಿನಂತೆ ಮೇ 17ರವರೆಗೆ ಮುಂದುವರಿಯಲಿದ್ದು, ಆದುದರಿಂದ ಯಾರು ಕೂಡ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ತೆರಳಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News