ಸೀಲ್‌ಡೌನ್ ಪ್ರದೇಶಕ್ಕೆ ಶಾಸಕ ವೇದವ್ಯಾಸ್ ಭೇಟಿಗೆ ಪಿ.ವಿ.ಮೋಹನ್ ಆಕ್ಷೇಪ

Update: 2020-05-02 08:41 GMT

ಮಂಗಳೂರು, ಮೇ 2: ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಂಟೈನ್ಮೆಂಟ್ ವಲಯವಾಗಿ ಘೋಷಿಸಿ ಸೀಲ್‌ಡೌನ್ ಮಾಡಲಾಗಿರುವ ಬೋಳೂರು ಪರಿಸರಕ್ಕೆ ಶಾಸಕ ಡಿ.ವೇದವ್ಯಾಸ ಕಾಮತ್ ಭೇಟಿ ನೀಡಿರುವುದನ್ನು ಕಾಂಗ್ರೆಸ್ ಮುಖಂಡ ಪಿ.ವಿ. ಮೋಹನ್ ಆಕ್ಷೇಪಿಸಿದ್ದಾರೆ.

‘‘ಕೊರೋನ ವೈರಸ್ ಸೋಕಿಂತ ಮನೆ ಹಾಗೂ ಸುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ‌ಪ್ರದೇಶವಾಗಿ ಗುರುತಿಸಲಾಗುತ್ತದೆ. ಅಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸೀಲ್‌ಡೌನ್ ಮಾಡಲಾಗುತ್ತದೆ. ಅಲ್ಲಿ ಜನರ ಸಂಚಾರ ಸೇರಿದಂತೆ ಆ ವಲಯಕ್ಕೆ ಪ್ರವೇಶ ನಿರ್ಬಂಧಿಸಲಾಗುತ್ತದೆ. ಅಲ್ಲಿಗೆ ಶಾಸಕರು ಹೋಗುವ ಅಗತ್ಯವೇನು. ಅವರಿಗೆ ಅಂತಹ ತುರ್ತು ಇದ್ದಲ್ಲಿ ಮೊಬೈಲ್ ಫೋನ್ ಇದೆ, ಅಲ್ಲಿ ಕೆಲಸ ಮಾಡುವ ಆರೋಗ್ಯಾಧಿಕಾರಿಗಳಿದ್ದಾರೆ. ಅದನ್ನು ಬಿಟ್ಟು ಅವರು ಹೋದದ್ದು ಅಕ್ಷಮ್ಯ ಅಪರಾಧ. ಕರ್ನಾಟಕದಲ್ಲಿ ಯಾವ ಶಾಸಕರೂ ಮಾಡದ ಕೆಲಸ ವೇದವ್ಯಾಸ ಕಾಮತ್ ಮಾಡಿದ್ದಾರೆ’’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘‘ಜಿಲ್ಲೆಯಲ್ಲಿ ಸರಿಯಾದ ನಾಯಕತ್ವ ಇಲ್ಲದೆ ಇರುವುದರಿಂದ ನಾವು ಇದೀಗ ಆರೆಂಜ್ ರೆನ್ ನಲ್ಲಿದ್ದೇವೆ. ಇಲ್ಲವಾದಲ್ಲಿ ನಮ್ಮ ನೆರೆಯ ಉಡುಪಿಯಂತೆ ನಾವೂ ಹಸಿರು ವಲಯದಲ್ಲಿರುತ್ತಿದ್ದೆವು. ಹಸಿರು ವಲಯದಲ್ಲಿದ್ದಿದ್ದರೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತಿತ್ತು. ಆರೋಗ್ಯ ಕ್ಷೇತ್ರವೂ ಸದೃಢವಾಗಿ ಇರಿಸಬಹುದಿತ್ತು. ಜಿಲ್ಲಾಡಳಿತ ಕೈಕಟ್ಟಿ ಕುಳಿತಿದೆ. ಲಾಕ್‌ಡೌನ್ ಆದಾಗ ಜನತಾ ಕರ್ಫ್ಯೂ ಹೇರಿದಾಗಲೂ ಎಲ್ಲರೂ ಸಹಕಾರ ನೀಡಿದ್ದೇವೆ. ಅವರು ತೆಗೆದುಕೊಂಡ ನಿರ್ಧಾರ ಸರಿ ಎಂದು ನಾವು ಬೆಂಬಲಿಸಿದ್ದೇವೆ. ನಾವೇನೂ ಅದರ ಬಗ್ಗೆ ರಾಜಕೀಯ ಮಾಡಿಲ್ಲ. ಆದರೆ ಆಡಳಿತ ಪಕ್ಷ ರಾಜಕೀಯ ಮಾಡುತ್ತಿದೆ ಎಂದವರು ದೂರಿದರು. 

ಬೆಳ್ತಂಗಡಿ, ಮಂಗಳೂರು ಉತ್ತರ ಕ್ಷೇತ್ರದ ಶಾಸಕರು ಬಂದು ಉಳ್ಳಾಲದಲ್ಲಿ ಅಕ್ಕಿ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಇರಲಿ ಇದರಿಂದ ಬಡವರಿಗೆ ಅಕ್ಕಿ ಸಿಗುತ್ತದೆ. ಆದರೆ ಆಡಳಿತ ಪಕ್ಷ ರಾಜಕೀಯ ಬಿಟ್ಟು ಕೊರೋನ ನಿಯಂತ್ರಣ, ಅದರ ಹರಡುವಿಕೆಯನ್ನು ತಡೆಯಲು ಕ್ರಮ ವಹಿಸಬೇಕಾಗಿದೆ. ನಾಯಕತ್ವ ಈ ಸಂದರ್ಭ ಮಾದರಿಯಾಗಬೇಕು. ಅದು ಬಿಟ್ಟು ನಾವೇ ಹರಡುವವರಾಗಬಾರದು. ನನಗೆ ನಮ್ಮ ಶಾಸಕರ ಬಗ್ಗೆ ಗೌರವ ಇದೆ. ಆದರೆ ನಿನ್ನೆಯ ಘಟನೆ ನನಗೆ ಆಶ್ಚಯ ನೀಡಿದೆ. ಆಸಕ್ತಿ ಇರುವವರು, ಆದರೆ ಭಾವನಾತ್ಮಕವಾಗಿ ವರ್ತಿಸಿದ್ದಾರೆ. ನಿನ್ನೆಯದ್ದು ಅವರದ್ದು ಕೆಟ್ಟ ರಾಜಕೀಯ. ಅವರದ್ದೇ ಸರಕಾರ ತಂದಿರುವ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಿದಾಗ, ಅಲ್ಲಿಗೆ ಹೋಗಲು ಇವರಿಗೆ ಅನುಮತಿ ಇದೆಯೇ?’’ ಎಂದು ಪಿ.ವಿ.ಮೋಹನ್ ಪ್ರಶ್ನಿಸಿದ್ದಾರೆ.


ಶಾಸಕ ವೇದವ್ಯಾಸರೇ, ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಿ

‘‘ಶಾಸಕ ವೇದವ್ಯಾಸ ಕಾಮತ್ ಸ್ವಯಂಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಬೇಕು. ಆ ಮೂಲಕ ಅವರು ಮಾದರಿಯಾಗಬೇಕು’’ ಎಂದು ಮನವಿ ಮಾಡಿರುವ ಪಿ.ವಿ. ಮೋಹನ್, ‘‘ಇಲ್ಲವಾದಲ್ಲಿ ಜಿಲ್ಲಾಡಳಿತ ಅವರ ಹೋಂ ಕ್ವಾರಂಟೈನ್‌ಗೆ ಆದೇಶಿಸಬೇಕು. ಅವರ ಜತೆಗಿದ್ದವರನ್ನೂ ಹೋಂ ಕ್ವಾರಂಟೈನ್‌ಗೊಳಪಡಿಸಬೇಕು. ಜನಸಾಮಾನ್ಯರು ಮಾಸ್ಕ್ ಹಾಕದಿದ್ದರೆ, ಲಾಕ್‌ಡೌನ್ ಉಲ್ಲಂಘಿಸದಿದರೆ ದಂಡ ವಿಧಿಸಲಾಗುತ್ತದೆ. ಎಲ್ಲಾ ರೀತಿಯ ನಿರ್ಬಂಧ ಜನಸಾಮಾನ್ಯರಿಗೆ ಹೇರಲಾಗುತ್ತದೆ. ಹಾಗಿರುವಾಗ ನೆಲದ ಕಾನೂನು, ನಿಯಮಗಳು ಎಲ್ಲರಿಗೂ ಅನ್ವಯವಾಗುತ್ತದೆ.’’ ಎಂದು ಪಿ.ವಿ. ಮೋಹನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News