ಲಾಕ್‌ಡೌನ್ ಅವಧಿಯನ್ನು ರಮಝಾನ್ ಮುಗಿಯುವವರೆಗೆ ವಿಸ್ತರಿಸಲು ದ.ಕ.ಜಿಲ್ಲಾಧಿಕಾರಿಗೆ ಖಾಝಿ ಬೇಕಲ್ ಉಸ್ತಾದ್ ಮನವಿ

Update: 2020-05-02 10:49 GMT

ಮಂಗಳೂರು, ಮೇ 2: ಕರಾವಳಿಯಲ್ಲಿ ಲಾಕ್‌ಡೌನ್ ಅವಧಿಯನ್ನು ರಮಝಾನ್ ಮುಗಿಯುವವರೆಗೆ ವಿಸ್ತರಿಸಬೇಕು ಎಂದು ಖಾಝಿ ಅಲ್‌ಹಾಜ್ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಅವರು ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಸರಕಾರ ಮತ್ತು ರಾಜ್ಯ ವಕ್ಫ್ ಮಂಡಳಿಯ ನಿರ್ದೇಶನದಂತೆ ಈ ಜಿಲ್ಲೆಯ ಮುಸ್ಲಿಮರು ರಮಝಾನ್‌ನಲ್ಲಿ ಮಸೀದಿ, ದರ್ಗಾಗಳಲ್ಲಿ ಇಫ್ತಾರ್ ಕೂಟ, ಸಾಮೂಹಿಕ ನಮಾಝ್, ತರಾವೀಹ್ ನಮಾಝ್, ಶುಕ್ರವಾರದ ಜುಮಾ ನಮಾಝನ್ನು ಮಸೀದಿಯ ಬದಲು ಮನೆಯಲ್ಲೇ ನಿರ್ವಹಿಸಿದ್ದಾರೆ. ಅಲ್ಲದೆ ಜಿಲ್ಲೆಯ ಮುಸ್ಲಿಮರೂ ಜಿಲ್ಲಾಡಳಿತಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಈ ಮಧ್ಯೆ ಈದ್ ನೆಪದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲು ಅವಕಾಶ ಮಾಡಿಕೊಟ್ಟರೆ ಜಿಲ್ಲಾದ್ಯಂತ ಜನದಟ್ಟಣೆ ಹೆಚ್ಚಾಗುವುದ ರಲ್ಲಿ ಸಂಶಯವಿಲ್ಲ. ಇದೊಂದು ಸಾಂಕ್ರಾಮಿಕ ರೋಗವಾದ ಕಾರಣ ಲಾಕ್‌ಡೌನ್ ಮುಂದುವರಿಸುವ ಅಗತ್ಯವಿದೆ. ಈಗಾಗಲೆ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಕ್ಕೆ ಉತ್ತಮ ಸ್ಪಂದನೆಯೂ ಲಭಿಸಿದೆ. ಹಾಗಾಗಿ ರಮಝಾನ್ ಮುಗಿಯುವವರೆಗೂ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಬೇಕು ಎಂದು ಖಾಝಿ ಬೇಕಲ್ ಉಸ್ತಾದ್ ಮನವಿ ಮಾಡಿದ್ದಾರೆ.

ಒಂದು ವೇಳೆ ಲಾಕ್‌ಡೌನ್ ಅವಧಿಯನ್ನು ಹಿಂದಕ್ಕೆ ಪಡೆದು ಜನರ ಮುಕ್ತ ಓಡಾಟಕ್ಕೆ ಅವಕಾಶ ಮಾಡಿಕೊಟ್ಟರೆ ಮುಸ್ಲಿಮರು ಈದ್ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಬಟ್ಟೆಬರೆ ಮತ್ತು ಹಬ್ಬದ ಸಾಮಗ್ರಿ ಖರೀದಿಸಲು ಮಾರುಕಟ್ಟೆಗೆ ಧಾವಿಸುತ್ತಾರೆ. ಈ ಸಂದರ್ಭ ಸುರಕ್ಷಿತ ಅಂತರ ಕಾಪಾಡುವುದು ಕೂಡ ಕಷ್ಟವಾಗಬಹುದು. ಈಗಾಗಲೆ ರಮಝಾನ್-ಈದುಲ್ ಫಿತ್‌ರ್ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲು ಮುಸ್ಲಿಮರು ಸಿದ್ಧರಾಗಿದ್ದಾರೆ. ಹಾಗಾಗಿ ಈ ರೋಗವನ್ನು ತಡೆಗಟ್ಟಲು ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಬೇಕು. ಹಬ್ಬದ ಬಳಿಕವೇ ಲಾಕ್‌ಡೌನ್ ತೆರವುಗೊಳಿಸಬೇಕು ಎಂದು ಖಾಝಿ ಬೇಕಲ್ ಉಸ್ತಾದ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News