×
Ad

ಹಸಿವಿನಿಂದ ಅಳುತ್ತಿರುವ ಮಕ್ಕಳನ್ನು ಸಮಾಧಾನಿಸಲು ಕಲ್ಲುಗಳನ್ನು ಬೇಯಿಸಿದ ಬಡ ತಾಯಿ !

Update: 2020-05-02 17:00 IST

ನೈರೋಬಿ: ಕೈಯಲ್ಲಿ ಹಣವಿಲ್ಲದೆ ಎಂಟು ಮಕ್ಕಳ ವಿಧವೆ ತಾಯಿಯೊಬ್ಬರು ಹಸಿವಿನಿಂದ ಕಂಗೆಟ್ಟು ಅಳುತ್ತಿರುವ ಮಕ್ಕಳನ್ನು ಸಮಾಧಾನಿಸಲು ಕಲ್ಲುಗಳನ್ನು ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಆಹಾರ ಸಿದ್ಧಪಡಿಸುತ್ತಿದ್ದೇನೆಂದು ಮಕ್ಕಳು ಅಂದುಕೊಳ್ಳುವಂತೆ ಮಾಡಿದ ಮನಕಲಕುವ ಘಟನೆಯೊಂದು ನಡೆದಿದೆ. ಕೆನ್ಯಾದ ಮೊಂಬಾಸ ಎಂಬಲ್ಲಿ ಈ ಘಟನೆ ನಡೆದಿದೆ.

ಅಮ್ಮ ಅಡುಗೆ ಮಾಡುತ್ತಿದ್ದಾಳೆಂದು ಸಂತಸಪಟ್ಟು ಮಕ್ಕಳು ಊಟಕ್ಕೆ ಕಾಯುತ್ತಾ ನಿದ್ದೆ ಹೋಗಬಹುದೆಂದು ತಾನು ಹೀಗೆ ಮಾಡಿದ್ದಾಗಿ ಮಕ್ಕಳ ತಾಯಿ ಪೆನಿನಾಹ್ ಬಹಾತಿ ಕಿಟ್ಸಾವೊ ಹೇಳುತ್ತಾಳೆ. ಈ ಹಿಂದೆ ಬಟ್ಟೆ ಒಗೆಯುವ ಕೆಲಸ ಮಾಡುತ್ತಿದ್ದ ಆಕೆಗೆ  ಈಗ ಕೊರೋನವೈರಸ್‍ನಿಂದಾಗಿ ಆ ಕೆಲಸ ತಪ್ಪಿ ಹೋಗಿದೆ. ಆಕೆಯ ಗಂಡ ಕಳೆದ ವರ್ಷ ಗ್ಯಾಂಗ್ ಒಂದರಿಂದ ಹತನಾಗಿದ್ದ.

ಮಕ್ಕಳು ಜೋರಾಗಿ ಅಳುತ್ತಿದ್ದುದನ್ನು ಕೇಳಿ ನೆರೆಮನೆಯ ಮಹಿಳೆಯೊಬ್ಬರು ನೋಡಲು ಬಂದಾಗ ಆಕೆ ಕಲ್ಲುಗಳನ್ನು ಬೇಯಿಸುವ ನಾಟಕವನ್ನು ಮಾಡುತ್ತಿರುವದನ್ನು ನೋಡಿ ಮನ ಕರಗಿ ಆಕೆಯ ವಿಚಾರವನ್ನು ಮಾಧ್ಯಮಕ್ಕೆ ತಿಳಿಸಿದ್ದಳು. ಆಕೆಯ ವ್ಯಥೆಯ ಕಥೆ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಹಲವು ಕೆನ್ಯಾ ನಾಗರಿಕರು ಆಕೆಯ ಸಹಾಯಕ್ಕೆ ಧಾವಿಸಿದ್ದು, ನೆರೆಮನೆಯಾಕೆಯ ಸಹಾಯದಿಂದ ತೆರೆಯಲಾದ ಖಾತೆಯಲ್ಲಿ ದಾನಿಗಳ ದೇಣಿಗೆ ಸೇರುತ್ತಿದೆ. ಇದು ಪವಾಡವಲ್ಲದೆ ಮತ್ತಿನ್ನೇನಲ್ಲ ಎಂದು ಪೆನಿನಾಹ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News