ಉಡುಪಿ: ಮದುವೆಗೆ ಬಂದ ಅಂತರ್ ಜಿಲ್ಲೆಯ ಜನ ; ಮದುಮಗ ಸೇರಿ 26 ಮಂದಿಗೆ ಕ್ವಾರಂಟೈನ್
Update: 2020-05-02 17:36 IST
ಉಡುಪಿ: ಕೊರೋನ ಲಾಕ್ ಡೌನ್ ನಡುವೆಯೂ ಮದುವೆಯಾದ ಮದುಮಗ ಸೇರಿದಂತೆ 26 ಮಂದಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇವರನ್ನೆಲ್ಲ ಕಾರ್ಕಳ ತಾಲೂಕಿನ ಹಲವೆಡೆಗಳಲ್ಲಿ ಆರೋಗ್ಯ ಇಲಾಖೆ ಕ್ವಾರಂಟೈನ್ ಗೆ ಒಳಪಡಿಸಿದೆ. ಮದುವೆಗೆ ಹೊರ ಜಿಲ್ಲೆಯಿಂದ ಅತಿಥಿಗಳು ಬಂದದ್ದೇ ಇದಕ್ಕೆ ಕಾರಣ.
ಉಡುಪಿ ಜಿಲ್ಲೆಯ ಕುತ್ಯಾರಿನಲ್ಲಿ ನಡೆದ ಈ ಮದುವೆಗೆ ಮಂಗಳೂರು, ಬೆಂಗಳೂರು, ಬಂಟ್ವಾಳ ಮತ್ತು ದಾವಣಗೆರೆಯಿಂದ ಜನ ಬಂದಿದ್ದರು. ಮದುವೆಗೆ ಅಂತರ್ ಜಿಲ್ಲೆಯಿಂದ ಜನ ಬಂದ ಕಾರಣ ಮದುವೆ ಮುಗಿಸಿ ಸಂಜೆ ಮನೆಗೆ ಬಂದ ಮದುಮಗನಿಗೂ ಕ್ವಾರಂಟೈನ್ ವಿಧಿಸಲಾಯಿತು.
ಮನೆ ಬಳಿ ಕಾದುಕುಳಿತಿದ್ದ ಆಶಾ ಕಾರ್ಯಕರ್ತೆಯರು ಮಾಹಿತಿ ನೀಡಿದ ಬಳಿಕ ಆರೋಗ್ಯ ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ಬೋಳ ಗ್ರಾಮವೊಂದರಲ್ಲೇ 18 ಮಂದಿಗೆ ಕ್ವಾರಂಟೈನ್ ವಿಧಿಸಲಾಗಿದೆ. ಸದ್ಯ ಜಿಲ್ಲಾ ಗಡಿಯಲ್ಲಿ ಸ್ವಲ್ಪಮಟ್ಟಿನ ರಿಯಾಯಿತಿ ಇರುವುದರಿಂದ ಒಳದಾರಿಯಿಂದ ಅನ್ಯ ಜಿಲ್ಲೆಯ ಜನರು ಜಿಲ್ಲೆಗೆ ಆಗಮಿಸುತ್ತಿದ್ದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.