ಬ್ರಹ್ಮಾವರ: ಲಿಫ್ಟ್ ಕೊಡುವ ನೆಪದಲ್ಲಿ ಅತ್ಯಾಚಾರ ಯತ್ನ
ಉಡುಪಿ, ಮೇ2: ಜಿಲ್ಲೆಯಾದ್ಯಂತ ಲಾಕ್‌ಡೌನ್ ಇದ್ದ ಸಂದರ್ಭದಲ್ಲಿ ಅಪರಿಚಿತ ಯುವಕನೊಬ್ಬ ಮಹಿಳೆಯೊಬ್ಬರಿಗೆ ಲಿಫ್ಟ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗುವ ವಿಫಲ ಪ್ರಯತ್ನ ನಡೆಸಿದ ಘಟನೆಯೊಂದು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಬ್ರಹ್ಮಾವರದ ಪ್ಲಾಟ್ ಒಂದರಲ್ಲಿ ಆಯಾ ಹಾಗೂ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಕಾಪುವಿನ ಮಹಿಳೆ, ಎಂದಿನಂತೆ ಮೇ1ರಂದು ಬೆಳಗ್ಗೆ ಮನೆಗೆ ತೆರಳಲು ತಮ್ಮನಿಗಾಗಿ ಕಾಯುತಿದ್ದು, ಆತನನ್ನು ಎದುರು ನೋಡುತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತಿದ್ದಾಗ, ಅಪರಿಚಿತನೊಬ್ಬ ಮಹಿಳೆ ಒಬ್ಬರೇ ನಡೆದುಹೋಗುವುದನ್ನು ನೋಡಿ ಬೈಕ್ ನಿಲ್ಲಿಸಿ ಕಾರಣ ಕೇಳಿದ ಆತ, ಬೇಕಿದ್ದರೆ ತಾನು ಲಿಫ್ಟ್ ನೀಡುವುದಾಗಿ ತಿಳಿಸಿದ. ತಮ್ಮ ಬರುತ್ತಿರು ವುದಾಗಿ ತಿಳಿಸಿದರೂ ಲಿಫ್ಟ್ ನೀಡುವುದಾಗಿ ಒತ್ತಾಯ ಪೂರ್ವಕವಾಗಿ ನಂಬಿಸಿ ಬೈಕ್ ಹತ್ತಿಸಿಕೊಂಡ ಎನ್ನಲಾಗಿದೆ.
ಆದರೆ ಬಿ.ಸಿ.ರೋಡ್‌ನಿಂದ ಮುಂದೆ ಸಾಗುತಿದ್ದಂತೆ ರುಡ್‌ಸೆಟ್ ಕ್ರಾಸ್ ಬಳಿ ಆತ ಎಡಕ್ಕೆ ತಿರುಗಿಸಿದ್ದು, ಆಕೆ ಕಾರಣ ಕೇಳಿದಾಗ ಮುಂದೆ ಪೊಲೀಸರಿದ್ದಾರೆ ಎಂದು ಸುಳ್ಳು ಹೇಳಿದ ಎಂದು ಆಕೆ ಬ್ರಹ್ಮಾವರ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಆಕೆಯ ಪ್ರತಿಭಟನೆಯ ನಡುವೆಯೂ ಆತ ಬೈಕ್‌ನ್ನು ನೀಲಾವರದಿಂದ ಮುಂದೆ ಕೂರಾಡಿಯವರೆಗೂ ಒಯ್ದು, ಅಲ್ಲಿನ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ ಎನ್ನಲಾಗಿದ್ದು, ಆಕೆ ಆತನನ್ನು ಬಲವಾಗಿ ದೂಡಿ ರಸ್ತೆಗೆ ಓಡಿ ಬಂದರೆನ್ನಲಾಗಿದೆ. ಅಲ್ಲಿ ಬಂದ ಬೈಕ್‌ನಲ್ಲಿ ಬಾರಕೂರಿಗೆ ಬಂದು ಅಲ್ಲಿಂದ ಬ್ರಹ್ಮಾವರಕ್ಕೆ ಬಂದು ತಮ್ಮನನ್ನು ಕರೆಸಿಕೊಂಡು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರಿಗೆ ತಿಳಿಸಿದರೆ ಕೊಂದು ಹಾಕುವುದಾಗಿ ಜೀವಬೆದರಿಕೆ ಒಡ್ಡಿದ್ದ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿ 40ರ ಆಸುಪಾಸಿನ ಪ್ರಾಯದವನಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಆತನ ಗುರುತು, ಬೈಕ್ ಸಂಖ್ಯೆ ಪತ್ತೆಯಾಗದಿದ್ದರೂ, ಬೈಕ್ ಮೋಡೆಲ್ ಗೊತ್ತಾಗಿದೆ. ಬ್ರಹ್ಮಾವರ ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಆತ ಬೈಕ್‌ನಲ್ಲಿ ಸಾಗುತ್ತಿರುವುದು ಸೆರೆಯಾಗಿದೆ. ಆತನನ್ನು ಗುರುತಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.