×
Ad

ಅಮೆರಿಕ: ಎಚ್-1ಬಿ ದಾಖಲೆಗಳನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ

Update: 2020-05-02 22:45 IST

ವಾಶಿಂಗ್ಟನ್, ಮೇ 2: ಭಾರತ ಸೇರಿದಂತೆ, ಅಮೆರಿಕದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಮತ್ತು ವಲಸಿಗರಿಗೆ ಎಚ್-1ಬಿ ವೀಸಾಕ್ಕೆ ಸಂಬಂಧಿಸಿ ಅಮೆರಿಕ ಸರಕಾರವು ಮಹತ್ವದ ರಿಯಾಯಿತಿಯೊಂದನ್ನು ಒದಗಿಸಿದೆ. ಎಚ್-1ಬಿ ವೀಸಾದಾರರು ಮತ್ತು ಗ್ರೀನ್ ಕಾರ್ಡ್‌ಗೆ ಅರ್ಜಿ ಹಾಕಿರುವವರಿಗೆ ವಿವಿಧ ದಾಖಲೆಗಳನ್ನು ಸಲ್ಲಿಸಲು ಈತ 60 ದಿನಗಳ ವಿನಾಯಿತಿ ಅವಧಿಯನ್ನು ನೀಡಲಾಗಿದೆ.

ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಎಚ್-1ಬಿ ವೀಸಾದಾರರು ಮತ್ತು ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೆ ಈಗಾಗಲೇ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿತ್ತು. ಆದರೆ, ಅಮೆರಿಕದಲ್ಲಿ ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕದ ತೀವ್ರತೆಯನ್ನು ಪರಿಗಣಿಸಿ ಸರಕಾರವು ಈ 60 ದಿನಗಳ ರಿಯಾಯಿತಿಯನ್ನು ಒದಗಿಸಿದೆ.

ಅಮೆರಿಕದ ಕಂಪೆನಿಗಳು ಎಚ್-1ಬಿ ವೀಸಾಗಳ ಮೂಲಕ, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷ ನೈಪುಣ್ಯ ಹೊಂದಿರುವ ವಿದೇಶೀಯರನ್ನು ನೇಮಿಸಿಕೊಳ್ಳುತ್ತವೆ. ಈ ಮೂಲಕ ಅಮೆರಿಕದ ಕಂಪೆನಿಗಳು ಪ್ರತಿ ವರ್ಷ ಭಾರತ ಮತ್ತು ಚೀನಾಗಳ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ.

ಗ್ರೀನ್ ಕಾರ್ಡ್ ಅಥವಾ ಖಾಯಂ ವಾಸ್ತವ್ಯ ಕಾರ್ಡ್ ಹೊಂದಿರುವ ವಲಸಿಗರು ಅಮೆರಿಕದಲ್ಲಿ ಖಾಯಂ ಆಗಿ ನೆಲೆಸಬಹುದಾಗಿದೆ.

ನೋಟಿಸ್‌ಗಳಲ್ಲಿ ಕೋರಲಾಗಿರುವ ಮಾಹಿತಿಗಳಿಗೆ ಸಂಬಂಧಿಸಿ 60 ದಿನಗಳಲ್ಲಿ ಪಡೆಯಲಾದ ಉತ್ತರಗಳನ್ನು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ವಿಭಾಗವು ಪರಿಗಣಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇಲಾಖೆಯು ಪ್ರತಿ ವರ್ಷ ಗರಿಷ್ಠ 65,000 ಎಚ್-1ಬಿ ಉದ್ಯೋಗ ವೀಸಾಗಳನ್ನು ಅತ್ಯಂತ ಕೌಶಲಭರಿತ ವಿದೇಶಿ ಉದ್ಯೋಗಿಗಳಿಗೆ ವಿತರಿಸಬಹುದಾಗಿದೆ. ಜೊತೆಗೆ, ಇನ್ನೂ 20,000 ಎಚ್-1ಬಿ ವೀಸಾಗಳನ್ನು ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ಸ್ನಾತಕೋತ್ತರ (ಮಾಸ್ಟರ್ಸ್) ಅಥವಾ ಅದಕ್ಕಿಂತಲೂ ಹೆಚ್ಚಿನ ಪದವಿಗಳನ್ನು ಪಡೆದಿರುವ ವಿದೇಶೀಯರಿಗೆ ನೀಡಬಹುದಾಗಿದೆ.

ಪ್ರಸಕ್ತ ಕಾನೂನುಗಳ ಪ್ರಕಾರ, ಅಮೆರಿಕವು ಪ್ರತಿ ವರ್ಷ ಗರಿಷ್ಠ 1.40 ಲಕ್ಷ ಮಂದಿಗೆ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳನ್ನು ನೀಡಬಹುದಾಗಿದೆ ಹಾಗೂ ಒಂದು ದೇಶಕ್ಕೆ ಗರಿಷ್ಠ 7 ಶೇಕಡದಷ್ಟು ಕಾರ್ಡ್‌ಗಳನ್ನು ನೀಡಬಹುದಾಗಿದೆ.

ಭಾರೀ ಊಹಾಪೋಹಗಳ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡ ಕಿಮ್ ಸಿಯೋಲ್ (ದಕ್ಷಿಣ ಕೊರಿಯ), ಮೇ 2: ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸುಮಾರು 20 ದಿನಗಳಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ಆ ದೇಶದ ಅಧಿಕೃತ ಸುದ್ದಿಸಂಸ್ಥೆ ಕೆಸಿಎನ್‌ಎ ಶನಿವಾರ ವರದಿ ಮಾಡಿದೆ.

ಎಪ್ರಿಲ್ 15ರಂದು ನಡೆದ ಮಹತ್ವದ ಸರಕಾರಿ ಕಾರ್ಯಕ್ರಮದಲ್ಲೂ ಕಿಮ್ ಭಾಗವಹಿಸಿರಲಿಲ್ಲ ಹಾಗೂ ಸುಮಾರು 20 ದಿನಗಳ ಕಾಲ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದು ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಭಾರೀ ಊಹಾಪೋಹಗಳಿಗೆ ಕಾರಣವಾಗಿತ್ತು. ಅವರು ಗಂಭೀರ ಕಾಯಿಲೆಯೊಂದರಿಂದ ಬಳಲುತ್ತಿದ್ದಾರೆ ಎಂಬುದಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು.

ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್ ಸಮೀಪದ ಸುನ್‌ಚೊನ್ ಎಂಬಲ್ಲಿ ಶುಕ್ರವಾರ ನಡೆದ ಸಮಾರಂಭವೊಂದರಲ್ಲಿ ಕಿಮ್ ಭಾಗವಹಿಸಿದರು ಎಂದು ಕೆಸಿಎನ್‌ಎ ವರದಿ ಮಾಡಿದೆ.

ಶುಕ್ರವಾರದ ಕಾರ್ಯಕ್ರಮದಲ್ಲಿ ಕಿಮ್ ಕಾಣಿಸಿಕೊಂಡಾಗ ಸಮಾರಂಭದಲ್ಲಿ ಭಾಗವಹಿಸಿದವರು ಜೋರಾಗಿ ಆನಂದದ ಉದ್ಗಾರಗೈದರು ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News