ಲಾಕ್‌ಡೌನ್‌ನಿಂದ ಖಿನ್ನತೆಗೆ ಒಳಗಾದ ಮಕ್ಕಳು!

Update: 2020-05-03 04:55 GMT

ಬೆಂಗಳೂರು, ಮೇ 2: ಕೊರೋನ ವೈರಸ್ ಸೋಂಕು ಹರಡುವ ಭೀತಿ ಹಾಗೂ ಲಾಕ್‌ಡೌನ್‌ನಿಂದ ಐಟಿ-ಬಿಟಿ ಕಂಪೆನಿ ಉದ್ಯೋಗಿಗಳು, ಮಹಿಳೆಯರಂತೆಯೇ ಮಕ್ಕಳು ಕೂಡಾ ಆತಂಕ ಮತ್ತು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೆಲ ಮಕ್ಕಳು ರೂಢಿಸಿಕೊಂಡಿದ್ದ ಅಭ್ಯಾಸ ಮತ್ತು ದುಶ್ಚಟಗಳಿಂದ ದೂರವಿರುವುದು ಕಷ್ಟವಾಗಿ, ಕುಟುಂಬದ ಕಲಹಕ್ಕೆ ದಾರಿ ಮಾಡಿಕೊಡುತ್ತಿದೆ.

ಈ ಅಂಶವನ್ನು ದೃಢಪಡಿಸಿದ್ದು, ಚೈಲ್ಡ್ ರೈಟ್ಸ್ ಟ್ರಸ್ಟ್‌ಗೆ ಬಂದ ಕರೆಗಳು. ಲಾಕ್‌ಡೌನ್ ಹಿನ್ನೆಲೆ ಮಕ್ಕಳು ಮನೆಯಲ್ಲಿಯೇ ಇರುವುದರಿಂದ ಕೊರೋನ ವೈರಸ್ ಸೋಂಕು ಬಗ್ಗೆ ಭಯ ಉಂಟಾಗಿದೆ. ಮುಂದೇನಾಗಲಿದೆ ಎಂಬುದನ್ನು ನೆನೆದು ಆತಂಕಕ್ಕೆ ಒಳಗಾಗಿದ್ದಾರೆ. ಶಾಲೆಗೆ ಹೋಗಲು ಈಗಿನಿಂದಲೇ ತಯಾರಿಗಳು ನಡೆಯುತ್ತಿದ್ದು, ಪ್ರತೀ ವರ್ಷದಂತೆ ಈ ಬಾರಿ ಅಜ್ಜಿ, ತಾತನ ಊರಿಗೆ ಹೋಗಲು ಆಗಲಿಲ್ಲ ಎಂಬುದಾಗಿ ಹಲವು ಮಕ್ಕಳು ತಮ್ಮ ಅಳಲು ತೋಡೊಕೊಂಡಿದ್ದಾರೆ. ದಿನಕ್ಕೆ ನೂರಾರು ಕರೆಗಳು: ಲಾಕ್‌ಡೌನ್ ಹಿನ್ನೆಲೆ ಚೈಲ್ಡ್ ರೈಟ್ಸ್ ಟ್ರಸ್ಟ್‌ಗೆ ನೂರಾರು ಕರೆಗಳು ಬರುತ್ತಿದ್ದು, ಮಕ್ಕಳು ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಅದನ್ನು ಕೇಳಿ ಪರಿಹಾರ ನೀಡಲಾಗುತ್ತಿದೆ. ಮುಖ್ಯವಾಗಿ ಮಕ್ಕಳ ದುಶ್ಚಟಗಳ ಬಗ್ಗೆಯೂ ಕರೆಗಳು ಬಂದಿರುವುದು ಆತಂಕಕಾರಿ ವಿಷಯವಾಗಿದೆ. ಅದರಲ್ಲೂ ಮೊಬೈಲ್ ಬಳಕೆ ಬಗ್ಗೆಯೂ ಹೆಚ್ಚಾಗಿ ಕರೆಗಳು ಬರುತ್ತಿವೆ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ನ ನಾಗಸಿಂಹ ರಾವ್ ತಿಳಿಸಿದ್ದಾರೆ.

ದೂರವಾಣಿ ಮೂಲಕ ಕೌನ್ಸಲಿಂಗ್: ಚೈಲ್ಡ್ ರೈಟ್ಸ್ ಟ್ರಸ್ಟ್‌ಗೆ ಬರುತ್ತಿದ್ದ ಮಕ್ಕಳ ಸಮಸ್ಯೆ ಆಲಿಸಿ, ದೂರವಾಣಿ ಮೂಲಕ ಕೌನ್ಸಲಿಂಗ್ ನೀಡಲಾಗುತ್ತಿದೆ. ಈ ಬಗ್ಗೆ ಮಕ್ಕಳ ಪೋಷಕರಿಗೂ ಮಕ್ಕಳ ಬಗೆಗಿನ ಕೆಲ ಅಂಶಗಳನ್ನು ತಿಳಿಸಲಾಗುತ್ತಿದೆ. ಇದರಿಂದ ಕೆಲ ಮಕ್ಕಳು ಸುಧಾರಿಸಿಕೊಳ್ಳಲಿದ್ದಾರೆ.

ಕರೆಗಳ ಸಾರಾಂಶ: ‘

ನಮ್ಮ ಮಗ ಯಾವಾಗ ನೋಡಿದರೂ ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತಾನೆ. ‘ಮೊಬೈಲ್ ಕೊಡು’ ಎಂದು ಕೇಳಿದರೆ, ಜಗಳವಾಡುತ್ತಾನೆ. ಫೋನ್ ಬೇಕೆಂದು ಹಠ ಮಾಡುತ್ತಾನೆ. ಬೆಳಗ್ಗೆಯಿಂದ ಸಂಜೆಯವರೆಗೂ ಫೋನ್‌ನಲ್ಲಿಯೇ ಇರುತ್ತಾನೆ. ಡೇಟಾ ಮುಗಿದ ಬಳಿಕ ಟಿವಿ ಮೊರೆ ಹೋಗುತ್ತಾನೆ. ಇದು ಹೀಗೆಯೇ ಮುಂದುವರಿದರೆ, ಏನಾಗುತ್ತಾನೋ ಎಂಬ ಭಯ ಕಾಡುತ್ತಿದೆ. ನಾವೇನಾದರೂ ಮಾತನಾಡಿಸಿದರೆ, ಪ್ರತಿಕ್ರಿಯೆ ನೀಡುವುದಿಲ್ಲ. ಮನೆಯಲ್ಲಿಯೇ ಇರುವುದರಿಂದಾಗಿ ಫೋನ್‌ನ ಗೀಳು ಹೆಚ್ಚಾಗಿದೆ’ ಎಂದು ಪೋಷಕರೊಬ್ಬರು ಚೈಲ್ಡ್ ಲೈನ್‌ಗೆ ಕರೆ ಮಾಡಿದ ವೇಳೆ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

ಪುಸ್ತಕ ನೋಡಿ ನೋಡಿ ಜಿಗುಪ್ಸೆಆಗಿದೆ

‘ನಾನು ಎಸೆಸೆಲ್ಸಿ ಓದುತ್ತಿದ್ದು, ಪರೀಕ್ಷೆ ಬರೆಯಬೇಕು ಎನ್ನುವಷ್ಟರಲ್ಲಿಯೇ ಲಾಕ್‌ಡೌನ್ ಘೋಷಿಸಲಾಯಿತು. ಇದರಿಂದ ಆತಂಕಕ್ಕೆ ಒಳಗಾಗಿದ್ದಾನೆ. ಅವಸರದಲ್ಲಿ ಪರೀಕ್ಷೆ ನಡೆಸಿದರೆ ಹೇಗೆ ಬರೆಯಬೇಕು ಎಂಬ ಚಿಂತೆ ಕಾಡುತ್ತಿದೆ. ಮನೆಯಲ್ಲಿಯೇ ಇರುವುದರಿಂದಾಗಿ ಓದು ಓದು ಎಂದು ನಿರಂತರ ಕಾಟ ಕೊಡುತ್ತಿದ್ದಾರೆ. ಸುಮಾರು ತಿಂಗಳಿಂದ ಓದಿದ್ದನ್ನೇ ಓದಿ ಕಂಠಪಾಠವಾದಂತಾಗಿದೆ. ಟಿವಿ, ಮೊಬೈಲ್ ನೋಡಲು ಅವಕಾಶ ನೀಡುತ್ತಿಲ್ಲ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 10ರ ವರೆಗೆ ಓದುಬೇಕು. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟ ಮಾಡಲು ಅಷ್ಟೇ ಬಿಡುವು ಸಿಗುತ್ತಿದೆ. ಅದರಲ್ಲೂ ಟಿವಿ ನೋಡಲು ಕುಳಿತರೆ ‘ಸಾಕು ಓದು’ ಎಂದು ಹೇಳುತ್ತಾರೆ. ಇದರಿಂದಾಗಿ ಪುಸ್ತಕ ನೋಡಿ ನೋಡಿ ಜಿಗುಪ್ಸೆ ಬಂದಿದೆ. ಮನೆಯಲ್ಲಿ ಪೋಷಕರು ಪರೀಕ್ಷೆ ಯಾವಾಗ ಆರಂಭವಾಗುತ್ತದೆಯೋ ಏನೋ ಎಂದು ಯೋಚಿಸುತ್ತಾರೆ. ಇದರ ನಡುವೆ ನನಗಂತೂ ತಲೆನೋವು ಜಾಸ್ತಿಯಾಗಿದೆ’ ಎಂದು ಬೆಂಗಳೂರಿನ ಬಾಲಕನೋರ್ವ ಕರೆ ಮಾಡಿ ತಿಳಿಸಿದ್ದಾನೆ.

ಲಾಕ್‌ಡೌನ್‌ನಿಂದಾಗಿ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಎಂದು ಪೋಷಕರು ದೂರಿದರೆ, ‘ದುಶ್ಚಟದಿಂದ ದೂರ ಉಳಿಯಲು ಸಾಧ್ಯವಾಗುತ್ತಿಲ್ಲ. ಸಿಗರೇಟ್ ಇಲ್ಲದಿದ್ದರೆ ಬದುಕಲು ಆಗುವುದಿಲ್ಲ’ ಎಂದು ಮಕ್ಕಳು ಕರೆ ಮಾಡಿ ಹೇಳುತ್ತಿದ್ದಾರೆ. ಪ್ರತಿದಿನ ಪೋಷಕರು ಮತ್ತು ಮಕ್ಕಳ ಕರೆಗಳು ಹೆಚ್ಚಾಗಿ ಬರುತ್ತಿದೆ.

 ನಾಗಸಿಂಹ ರಾವ್,

 ಚೈಲ್ಡ್ ರೈಟ್ಸ್ ಟ್ರಸ್ಟ್ ನ ಮುಖ್ಯಸ್ಥ

ಸಮಸ್ಯೆ ಪರಿಹರಿಸಿಕೊಳ್ಳಿ

ಆತಂಕ, ಖಿನ್ನತೆಗೆ ಒಳಗಾದ ಮಕ್ಕಳು. ಚೈಲ್ಡ್ ಲೈನ್ ಟ್ರಸ್ಟ್‌ಗೆ ಕರೆ ಮಾಡಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಳ್ಳಬಹುದು. ಚೈಲ್ಡ್ ರೈಟ್ಸ್ ದೂರವಾಣಿ ಸಂಖ್ಯೆ: 9880477198ಗೆ ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದು.

Writer - ಯುವರಾಜ್ ಮಾಳಗಿ

contributor

Editor - ಯುವರಾಜ್ ಮಾಳಗಿ

contributor

Similar News