ನವಜಾತ ಗಂಡುಶಿಶುವಿಗೆ ತನ್ನ ಜೀವವನ್ನು ಉಳಿಸಿದ ವೈದ್ಯರ ಹೆಸರಿಟ್ಟ ಬ್ರಿಟನ್ ಪ್ರಧಾನಿ ಬೊರಿಸ್
ಲಂಡನ್, ಮೇ 3: ಇತ್ತೀಚೆಗಷ್ಟೇ ಕೋವಿಡ್-19 ವೈರಸ್ ಸೋಂಕಿನಿಂದ ಗುಣಮುಖವಾಗಿ ತನ್ನ ಕರ್ತವ್ಯಕ್ಕೆ ವಾಪಸಾಗಿರುವ ಬ್ರಿಟನ್ ಪ್ರಧಾನಮಂತ್ರಿ ಬೊರಿಸ್ ಜಾನ್ಸನ್ ತನ್ನ ಜೀವವನ್ನ್ನು ಉಳಿಸಿದ ಇಬ್ಬರು ವೈದ್ಯರಿಗೆ ಗೌರವ ಸಲ್ಲಿಸಲು ತನ್ನ ನವಜಾತ ಗಂಡುಮಗುವಿಗೆ ವೈದ್ಯರ ಹೆಸರನ್ನೇ ಇಟ್ಟಿದ್ದಾರೆ.
ಬೋರಿಸ್‌ಗೆ ಚಿಕಿತ್ಸೆ ನೀಡಿರುವ ಇಬ್ಬರು ವೈದ್ಯರು ಹಾಗೂ ಮಗುವಿನ ಅಜ್ಜನ ಹೆಸರುಗಳನ್ನು ತಮ್ಮ ಗಂಡುಮಗುವಿಗೆ ಇಟ್ಟಿದ್ದೇವೆ ಎಂದು ಬೊರಿಸ್ ಪತ್ನಿ ಕಾರಿ ಸೈಮಂಡ್ಸ್ ಶನಿವಾರ ಹೇಳಿದ್ದಾರೆ.
ಬೊರಿಸ್ ಜಾನ್ಸನ್ ಕೊರೋನ ವೈರಸ್‌ನಿಂದ ಚೇತರಿಸಿಕೊಂಡು ಹಲವು ವಾರಗಳ ಬಳಿಕ ತನ್ನ ಕಚೇರಿಗೆ ವಾಪಸಾದ ಮರುದಿನವೇ ವಿಲ್ಫ್ರೆಡ್ ಲಾರಿ ನಿಕೊಲಸ್ ಜಾನ್ಸನ್ ಹೆಸರಿನ ಮಗು ಜನಿಸಿದೆ. 32ರ ಹರೆಯದ ಸೈಮಂಡ್ಸ್ ತನ್ನ ಪುತ್ರ ತೊಟ್ಟಿಲಲ್ಲಿರುವ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದರು. ಎಪ್ರಿಲ್ 29ರಂದು ಬೆಳಗ್ಗೆ 9ಕ್ಕೆ ವಿಲ್ಫ್ರೆಡ್ ಲಾರಿ ನಿಕೊಲಸ್ ಜಾನ್ಸನ್ ಜನಿಸಿದ್ದಾಗಿ ಹೇಳಿದ್ದಾರೆ.
ವಿಲ್ಪ್ರೆಡ್ ಎಂದರೆ ಬೊರಿಸ್‌ರ ಅಜ್ಜನ ಹೆಸರು, ಲಾರಿ,ನನ್ನ ಅಜ್ಜನ ಹೆಸರು,ನಿಕೊಲಸ್ ಎಂದರೆ ಕಳೆದ ತಿಂಗಳು ಬೊರಿಸ್ ಜೀವವನ್ನ ಉಳಿಸಿರುವ ಇಬ್ಬರು ವೈದ್ಯರಾದ ಡಾ.ನಿಕ್ ಪ್ರೈಸ್ ಹಾಗೂ ಡಾ.ನಿಕ್ ಹಾರ್ಟ್ ಅವರ ಹೆಸರು ಎಂದು ಸೈಮಂಡ್ಸ್ ವಿವರಿಸಿದರು.
ಲಂಡನ್ ಆಸ್ಪತ್ರೆಯ ಯುನಿವರ್ಸಿಟಿ ಕಾಲೇಜಿನ ರಾಷ್ಟ್ರೀಯ ಆರೋಗ್ಯ ಸೇವೆಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಆರೋಗ್ಯಪಾಲನ ಕಾರ್ಯಕರ್ತರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರು.ನನ್ನ ಹೃದಯ ತುಂಬಿರುವ ಕಾರಣ ಸಂತೋಷವಾಗಿರದಿರಲು ಸಾಧ್ಯವಿಲ್ಲ ಎಂದು ಸೈಮಂಡ್ಸ್ ಟ್ವೀಟ್ ಮಾಡಿದ್ದಾರೆ.