×
Ad

ಮೇ 4ರಿಂದ ದ.ಕ. ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ ರಾತ್ರಿ 7ರವರೆಗೆ ಲಾಕ್‌ಡೌನ್ ಸಡಿಲಿಕೆ : ಡಿಸಿ ಸಿಂಧೂ ರೂಪೇಶ್

Update: 2020-05-03 16:13 IST
ದ.ಕ. ಜಿಲ್ಲಾಧಿಕಾರಿ

ಮಂಗಳೂರು, ಮೇ 3: ಕೋವಿಡ್-19 ನಿಯಂತ್ರಣದ ಹಿನ್ನೆಲೆಯಲ್ಲಿ ವಿಧಿಸಲ್ಪಟ್ಟ ಲಾಕ್‌ಡೌನ್ ಮೇ 17ರವರೆಗೆ ಮುಂದುವರಿದಿದೆ. ಈ ಮಧ್ಯೆ ದ.ಕ. ಜಿಲ್ಲೆಯಲ್ಲಿ ಕೆಲವು ಚಟುವಟಿಕೆಗಳಿಗೆ ಮಾತ್ರ ಜಿಲ್ಲಾಡಳಿತ ಅನುಮತಿ ನೀಡಿದೆ. ಅಧಿಕ ಸಂಖ್ಯೆಯಲ್ಲಿ ಜನರು ಸೇರುವಂತಹ ಶಾಲಾ-ಕಾಲೇಜುಗಳನ್ನು ತೆರೆಯಲು ಅವಕಾಶವಿಲ್ಲ. ಮಾಲ್‌ಗಳಲ್ಲಿ ಜೀವನಾವಶ್ಯಕವಲ್ಲದ ವಸ್ತುಗಳು ಮಾರಾಟ ಮತ್ತು ಮಾರುಕಟ್ಟೆ ಸಂಕೀರ್ಣಗಳ ಸಹಿತ ಇತರ ಎಲ್ಲ ಸಭೆ ಸಮಾರಂಭಗಳನ್ನು ನಡೆಸಲು ಅನುಮತಿ ನೀಡಿಲ್ಲ. ಅನುಮತಿ ನೀಡಲಾದ ಚಟುವಟಿಕೆಗಳಿಗೆ ತೆರಳುವವರಿಗೆ ಪಾಸ್ ಅಗತ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಈಗಾಗಲೇ ಕೊರೋನ ಪಾಸಿಟಿವ್ ಪ್ರಕರಣಗಳ ಮೂಲಕ ಕಂಟೈನ್ಮೆಂಟ್ ರೆನ್ ಎಂದು ಗುರುತಿಸಿರುವ ಸ್ಥಳಗಳಲ್ಲಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ. ಕಂಟೈನ್ಮೆಂಟ್‌ಗಳಿಂದ ಹೊರಗಿನ ವ್ಯಾಪ್ತಿಯಲ್ಲಿ ಮಾತ್ರ ಕೆಲವು ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಅಂದರೆ ಆರೆಂಜ್ ವಲಯವಾಗಿ ಗುರುತಿಸಿಕೊಂಡಿರುವ ದ.ಕ.ಜಿಲ್ಲೆಯಲ್ಲಿ ಮೇ 4ರಿಂದ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಲಾಕ್‌ಡೌನ್ ಸಡಿಲಿಸಲಾಗಿದೆ. ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ಲಾಕ್‌ಡೌನ್ ಮುಂದುವರಿಯಲಿದೆ. ಹಾಗಾಗಿ ಈ ಅವಧಿಯಲ್ಲಿ ಎಲ್ಲಾ ರೀತಿಯ ಸಂಚಾರ, ಸೇವೆಯು ಬಂದ್ ಆಗಲಿದೆ.

ಅನುಮತಿ ನೀಡಿದ ಚಟುವಟಿಕೆಗಳು

*ಸುರಕ್ಷಿತ ಅಂತರ ನಿಯಮ ಪಾಲನೆ ಮತ್ತು ಇತರ ಸುರಕ್ಷಾ ಕ್ರಮಗಳೊಂದಿಗೆ ಹೊರ ರೋಗಿ ವಿಭಾಗ (ಒಪಿಡಿ) ಮತ್ತು ವೈದ್ಯಕೀಯ ಕ್ಲಿನಿಕ್‌ಗಳ ಕಾರ್ಯಾಚರಣೆಗೆ ಅವಕಾಶ.
*ಚಾಲಕ ಮತ್ತು ಇಬ್ಬರು ಪ್ರಯಾಣಿಕರ ಜತೆ ಆಟೊ ರಿಕ್ಷಾ, ಟ್ಯಾಕ್ಸಿ ಮತ್ತು ಕ್ಯಾಬ್ ಓಡಿಸಲು ಅನುಮತಿ.
*ಅನುಮತಿ ನೀಡಿದ ಚಟುವಟಿಕೆ ನಡೆಸಲು ವೈಯಕ್ತಿಕ ಮತ್ತು ವಾಹನಗಳಿಗೆ ಅನುಮತಿ ನೀಡಿದ್ದು, ಲಘು ವಾಹನದಲ್ಲಿ ಚಾಲಕನ ಜತೆ ಇಬ್ಬರು ಹಾಗೂ ದ್ವಿಚಕ್ರದಲ್ಲಿ ಒಬ್ಬರು ಮಾತ್ರ ಪ್ರಯಾಣಿಸಬೇಕು.
*ನಗರ ಪ್ರದೇಶದಲ್ಲಿ ಕೈಗಾರಿಕಾ ಚಟುವಟಿಕೆಗಳಾದ ವಿಶೇಷ ಆರ್ಥಿಕ ವಲಯ, ರಫು ಆಧಾರಿತ ಘಟಕಗಳು, ಕೈಗಾರಿಕೆ ವಲಯಗಳು ಮತ್ತು ಕೈಗಾರಿಕಾ ಟೌನ್‌ಶಿಪ್ ಮತ್ತು ಗ್ರಾಮೀಣ ಪ್ರದೇಶದ ಎಲ್ಲ ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ.
* ಇತರ ಕೈಗಾರಿಕಾ ಚಟುವಟಿಕೆಗಳಾದ ಅಗತ್ಯ ವಸ್ತುಗಳು, ಔಷಧ, ಫಾರ್ಮಾಸ್ಯುಟಿಕಲ್ಸ್, ಮೆಡಿಕಲ್ ಡಿವೈಸಸ್, ಅದರ ಕಚ್ಚಾ ವಸ್ತುಗಳು ಮತ್ತು ಇಂಟರ್ಮೇಡಿಯೇಟ್ಸ್ ಇತ್ಯಾದಿಗಳ ಉತ್ಪಾದನಾ ಘಟಕಗಳಿಗೆ ಅನುಮತಿ.
*ನಗರ ಪ್ರದೇಶಗಳಲ್ಲಿ ಇನ್ಸೈಟ್ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಮತ್ತು ರಿನೇವೇಬಲ್ ಎನರ್ಜಿ ಪ್ರಾಜೆಕ್ಟ್ಸ್ ಚಟುವಟಿಕೆಗಳಿಗೆ ಅನುಮತಿ. ಸೈಟ್‌ಗಳಲ್ಲಿ ಇರುವ ಕಾರ್ಮಿಕರನ್ನು ಬಿಟ್ಟು ಹೊರಗಿನ ಕಾರ್ಮಿಕರನ್ನು ತರುವಂತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಉದ್ಯೋಗ ಖಾತರಿ ಸಹಿತ ಎಲ್ಲ ಕಟ್ಟಡ ನಿರ್ಮಾಣ, ಆಹಾರ ಸಂಸ್ಕರಣೆ, ಇಟ್ಟಿಗೆ ಘಟಕಗಳಿಗೆ ಅನುಮತಿ.
*ವಸತಿ ಸಂಕೀರ್ಣ ಮತ್ತು ಕಾಲನಿಗಳ ಪಕ್ಕದ ಸಿಂಗಲ್ ಅಂಗಡಿಗಳನ್ನು ತೆರೆಯಲು ಅನುಮತಿ.
*ಅಗತ್ಯ ವಸ್ತುಗಳ ಪೂರೈಕೆಯ ಇ-ಕಾಮರ್ಸ್ ಚಟುವಟಿಕೆ.
*ಅಗತ್ಯಕ್ಕೆ ತಕ್ಕಂತೆ ಶೇ.33 ಸಿಬ್ಬಂದಿಯೊಂದಿಗೆ ಖಾಸಗಿ ಕಚೇರಿ ತೆರೆಯಲು ಅವಕಾಶ. ಉಳಿದವರಿಗೆ ಮನೆಯಿಂದಲೇ ಕೆಲಸ.
*ಸ್ಥಳೀಯ ಅಂಗಡಿಗಳು, ವಸತಿ ಸಂಕೀರ್ಣಗಳ ಶಾಪ್, ಸಣ್ಣಪುಟ್ಟ ಶಾಪ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಬಟ್ಟೆ ಅಂಗಡಿ ತೆರೆಯುವಂತಿಲ್ಲ

ರಮಝಾನ್-ಈದುಲ್ ಫಿತ್‌ರ್ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿ ತೆರೆಯಲು ಸಾಕಷ್ಟು ಒತ್ತಡ ಬಂದಿತ್ತು. ದ.ಕ.ಜಿಲ್ಲೆಯ ಮುಸ್ಲಿಮ್ ಸಮುದಾಯದೊಳಗಿಂದಲೇ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಬಟ್ಟೆ ಅಂಗಡಿ ತೆರೆಯಲು ಅನುಮತಿ ಸಿಕ್ಕಿಲ್ಲ. ಇದರಿಂದ ಸಮುದಾಯದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಆರೆಂಜ್ ರೆನ್‌ನಲ್ಲಿ ಸೆಲೂನ್, ಪಾರ್ಲರ್ ತೆರೆಯಲು ಅವಕಾಶವಿದ್ದರೂ ಕೂಡ ದ.ಕ ಜಿಲ್ಲೆಯಲ್ಲಿ ಅದನ್ನು ತೆರೆಯಲು ಅವಕಾಶ ಕೊಟ್ಟಿಲ್ಲ.
ಈ ಮಧ್ಯೆ ಹೊಟೇಲ್ ಬಾರ್, ರೆಸ್ಟೋರೆಂಟ್, ಮಾಲ್, ಸಿನಿಮಾ ಮಂದಿರ, ಜಿಮ್, ಕ್ರೀಡಾ ಸಂಕೀರ್ಣ, ಕ್ಲಬ್, ಸ್ವಿಮ್ಮಿಂಗ್ ಫೂಲ್, ಪಾರ್ಕ್, ಸೆಲೂನ್, ಸ್ಪಾ, ಬ್ಯೂಟಿ ಪಾರ್ಲರ್, ಟೆಕ್ಸೃ್ಟೈಲ್ಸ್ ಮತ್ತು ಬಟ್ಟೆ ಅಂಗಡಿಗಳು ಬಂದ್ ಆಗಲಿದೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸೇರಿ ಜನ ಸೇರುವ ಎಲ್ಲಾ ಕಾರ್ಯಕ್ರಮಗಳು ನಿಷೇಧ ಹೇರಲಾಗಿದೆ.

ಖಾಸಗಿ ಬಸ್ ಓಡಾಟವಿಲ್ಲ
ದ.ಕ.ಜಿಲ್ಲೆಯಲ್ಲಿ ಸುಮಾರು 325 ಸಿಟಿ ಬಸ್‌ಗಳು ಚಲಿಸುತ್ತಿತ್ತು. ಕಳೆದ ಒಂದುವರೆ ತಿಂಗಳಿನಿಂದ ಬಸ್‌ಗಳು ಚಲಿಸದ ಕಾರಣ ಪ್ರತಿನಿತ್ಯ ಕನಿಷ್ಠ 3.25 ಕೋ.ರೂ. ನಷ್ಟವಾಗುತ್ತಿತ್ತು. ಇನ್ನೀಗ ಜಿಲ್ಲೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿದ್ದರೂ ಕೂಡ ಅಲ್ಲಿ ಸುರಕ್ಷಿತ ಅಂತರಕ್ಕೆ ಆದ್ಯತೆ ನೀಡಬೇಕಾಗಿದೆ. ಅಂದರೆ ಅರ್ಧಕ್ಕರ್ಧ ಪ್ರಯಾಣಿಕರನ್ನಷ್ಟೇ ಸಾಗಿಸಬಹುದು. ಇದು ನಷ್ಟದ ಮೇಲೆ ನಷ್ಟವಾಗುವ ಸಾಧ್ಯತೆ ಇದೆ. ಹಾಗಾಗಿ ಮೇ 6ರಂದು ಬಸ್ ಮಾಲಕರ ಸಂಘದ ಸಭೆ ಕರೆದಿದ್ದೇವೆ. ಆ ಸಭೆಯಲ್ಲಿ ಬಸ್ ಸಂಚಾರ ಆರಂಭಿಸಬೇಕೇ, ಬೇಡವೇ ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

ಮಾರ್ಗಸೂಚಿಯಂತೆ ಜಿಲ್ಲೆಯ ಒಳಗೆ ವಾಹನಗಳ ಓಡಾಟಕ್ಕೆ ಅವಕಾಶವಿದೆ. ಬೇರೆ ಜಿಲ್ಲೆಗೆ ಹೋಗಬೇಕಾದರೆ ಪಾಸ್‌ಗಳನ್ನು ತಗೆದುಕೊಳ್ಳಬೇಕು. ಜಿಲ್ಲೆಯ ಒಳಗೆ ಯಾವುದೇ ಪಾಸ್ ಬೇಡ, ಖಾಸಗಿ ವಾಹನ ಹೋಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News