ಸೋಮವಾರದಿಂದ ತುಂಬೆ ಸೀಲ್‍ಡೌನ್ ಮುಕ್ತ: ಯು.ಟಿ.ಖಾದರ್
ಬಂಟ್ವಾಳ, ಎ. 3: ಮೂರನೇ ಹಂತದ ಲಾಕ್‍ಡೌನ್ ಮೇ 4ರಿಂದ ಮುಂದುವರಿಯಲಿದ್ದು ಈ ಅವಧಿಯಲ್ಲಿ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಆಟೋ ರಿಕ್ಷಾ, ಗೂಡ್ಸ್ ವಾಹನ, ಪ್ರವಾಸಿ ಕಾರು ಚಾಲಕರಿಗೆ ದುಡಿಯಲು ಅವಕಾಶ ನೀಡುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದೇನೆ. ಅದಕ್ಕೆ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ತುಂಬೆಯಲ್ಲಿ ರವಿವಾರ ಆಟೋ ಚಾಲಕರು, ಗೂಡ್ಸ್ ವಾಹನ, ಪ್ರವಾಸಿ ಕಾರುಗಳ ಮಾಲಕರಿಗೆ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಿದ ಬಳಿಕ ಮಾತನಾಡಿದ ಅವರು, ವ್ಯಕ್ತಿಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತುಂಬೆ ಗ್ರಾಮದ ಕೆಲವು ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಸೀಲ್‍ಡೌನ್ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸೀಲ್‍ಡೌನ್ ತೆಗೆಯಲು ಜಿಲ್ಲಾ ಆರೋಗ್ಯ ಅಧಿಕಾರಿಯೊಂದಿಗೆ ಮಾತನಾಡಿದ್ದು ಸೋಮವಾರದಿಂದ ಸೀಲ್‍ಡೌನ್ ತೆರವುಗೊಳಿಸಲು ಶಿಫಾರಸು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದರು.
ಲಾಕ್‍ಡೌನ್‍ನಿಂದ ಎಲ್ಲಾ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಈಗಾಗಲೇ ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರತೀ ಬೂತ್ ಮತ್ತು ಗ್ರಾಮ ಮಟ್ಟದಲ್ಲಿ ಪಕ್ಷದ ವತಿಯಿಂದ ಸಾಧ್ಯವಾದಷ್ಟು ನೆರವಾಗಿದ್ದೇವೆ. ವಿಶೇಷವಾಗಿ ಆಟೋ ರಿಕ್ಷಾ, ಗೂಡ್ಸ್ ವಾಹನ, ಪ್ರವಾಸಿ ಕಾರುಗಳ ಚಾಲಕರು ಮತ್ತು ಕಾರ್ಮಿಕರು ತುಂಬಾ ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ನಮ್ಮಿಂದ ಸಾಧ್ಯವಾದಷ್ಟು ನೆರವಾಗಿದ್ದೇವೆ. ಸರಕಾರ ಕೂಡಾ ಅವರಿಗೆ ಕೂಡಲೇ ನೆರವಾಗುವ ಮೂಲಕ ಸ್ವಾಭಿಮಾನದಿಂದ ಜೀವಿಸಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ತಿಯಾಝ್ ಆಲ್ಫಾ ತುಂಬೆ, ಪ್ರಮುಖರಾದ ಮೋನಪ್ಪ ಮಜಿ, ಪ್ರಕಾಶ್ ಶ್ರೀಶೈಲಾ, ರಶೀದ್ ತುಂಬೆ, ಜಗದೀಶ್ ಗಟ್ಟಿ, ಇಬ್ರಾಹೀಂ ವಳವೂರು, ಅಝೀಝ್ ವಳವೂರು, ಸುನಿಲ್ ರೊಟ್ಟಿಗುಡ್ಡೆ, ಮಾಕ್ಸಿಮ್ ರೊಟ್ಟಿಗುಡ್ಡೆ, ಮಾದವ ಬರೆ, ಪ್ರಭಾಕರ ರಾಮಲ್‍ಕಟ್ಟೆ, ಕೇಶವ ತುಂಬೆ, ಆಶಿಫ್ ಕೆಳಗಿನ ತುಂಬೆ, ಇಸಾಕ್ ತುಂಬೆ ಮೊದಲಾದವರು ಉಪಸ್ಥಿತರಿದ್ದರು.