×
Ad

ಉಡುಪಿ: ಮದ್ಯಮಾರಾಟಕ್ಕೆ ಬಿರುಸಿನ ಸಿದ್ಧತೆ

Update: 2020-05-03 21:00 IST

ಉಡುಪಿ, ಮೇ 3: ನಾಳೆಯಿಂದ ರಾಜ್ಯಾದ್ಯಂತ ಮದ್ಯದಂಗಡಿ ತೆರೆಯಲು ರಾಜ್ಯ ಸರಕಾರ ಹಸಿರು ನಿಶಾನೆ ತೋರಿಸಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲೂ ಇದಕ್ಕಾಗಿ ಬಿರುಸಿನ ಸಿದ್ಧತೆಗಳು ಇಂದು ನಡೆಯುತ್ತಿರುವುದು ಕಂಡು ಬಂತು.

ಜಿಲ್ಲೆಯಲ್ಲಿ ಅಂಗಡಿ-ಮುಂಗಟ್ಟುಗಳು ಬಾಗಿಲು ತೆರೆದು ವ್ಯಾಪಾರ ನಡೆಸುವ ಅವಧಿಯನ್ನು ಬೆಳಗ್ಗೆ 7ರಿಂದ ಅಪರಾಹ್ನ 1ರವರೆಗೆ ವಿಸ್ತರಿಸಿದ್ದು, ಅದರಂತೆ ಮದ್ಯ ಮಾರಾಟಕ್ಕೂ ಇದೇ ಅವಧಿಯಲ್ಲಿ ಅನುಮತಿ ದೊರಕಿದೆ. ಹೀಗಾಗಿ ಎಂಎಸ್‌ಐಎಲ್ ಮಳಿಗೆಗಳು ಮತ್ತು ವೈನ್‌ಶಾಪ್‌ಗಳ ಮುಂದೆ ಬಿರುಸಿನ ಚಟುವಟಿಕೆಗಳು ಕಂಡುಬಂದವು.

ಮದ್ಯದಂಗಡಿಗಳ ಮುಂದೆ ಜನರು ಖರೀದಿಗಾಗಿ ಸುರಕ್ಷಿತ ಅಂತರದೊಂದಿಗೆ ನಿಲ್ಲಲು ಮಾರ್ಕಿಂಗ್ ಮಾಡುವ ಕಾರ್ಯದಲ್ಲಿ ಸಿಬ್ಬಂದಿಗಳು ನಿರತರಾಗಿದ್ದರು. ಅಲ್ಲದೇ ಅಂಗಡಿ ಮುಂದೆ ಬ್ಯಾರಿಕೇಡ್ ಅವಡಿಸುವ ಕಾರ್ಯವೂ ನಡೆಯುತ್ತಿದೆ.

ಇದೇ ವೇಳೆ ಅಬಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಸೀಲ್ ತೆಗೆಯುವ ಕಾರ್ಯವೂ ನಡೆಯಿತು. ಅಬಕಾರಿ ಅಧಿಕಾರಿಗಳು ಸ್ಟಾಕ್ ‌ಚೆಕ್ ಮಾಡುತ್ತಿ ರುವ ದೃಶ್ಯವೂ ಕಂಡುಬಂತು. ಉಡುಪಿಯಲ್ಲಿ ಅಪರಾಹ್ನ ಒಂದು ಗಂಟೆಗೆ ಎಲ್ಲಾ ವ್ಯಾಪಾರ ವಹಿವಾಟನ್ನು ಮುಚ್ಚುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಲಾಕ್‌ಡೌನ್‌ನಿಂದಾಗಿ ಕಳೆದ 40 ದಿನಗಳಿಂದ ಮದ್ಯದಂಗಡಿಗಳೂ ಬಾಗಿಲು ಮುಚ್ಚಿದ್ದವು. ಇವುಗಳಿಗೆ ನಾಳೆಯಿಂದ ವ್ಯವಹಾರ ನಡೆಸಲು ಸರಕಾರ ಅನುಮತಿ ನೀಡಿದೆ. ಇದಕ್ಕಾಗಿಯೇ ಬಹುದಿನಗಳಿಂದ ಕಾಯುತ್ತಿರುವ ಮದ್ಯಪ್ರಿಯರು ನಾಳೆ ಒಮ್ಮೆಗೆ ಮುತ್ತಿಗೆ ಹಾಕುವ ಸಾಧ್ಯತೆ ಇರುವುದರಿಂದ ಸುರಕ್ಷಿತಾ ಅಂತರ ವನ್ನು ಕಾಪಾಡುವಂತೆಯೂ ಎಚ್ಚರಿಕೆ ನೀಡಲಾಗಿದೆ.

ಜನರ ಆರೋಗ್ಯ ಮುಖ್ಯ:  ಉಳಿದೆಡೆ ಸಂಜೆಯವರೆಗೆ ಮದ್ಯ ಮಾರಾಟ ನಡೆದರೆ, ನಮ್ಮ ಜಿಲ್ಲೆಯಲ್ಲಿ ಅಪರಾಹ್ನದವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಎಂಎಸ್‌ಐಎಲ್ ಹಾಗೂ ವೈನ್‌ಶಾಪ್‌ಗಳನ್ನು ಮದ್ಯಾಹ್ನದವರೆಗೆ ಮಾತ್ರ ತೆರೆದಿಡಲಾಗುತ್ತದೆ. ಜಿಲ್ಲೆಗೆ ವೈನ್‌ಶಾಪ್, ಮದ್ಯ ದಂಗಡಿ ಮುಖ್ಯ ಅಲ್ಲ. ನಮಗೆ ನಮ್ಮ ಜನರ ಆರೋಗ್ಯ ಮುಖ್ಯ.ಆದ್ದರಿಂದ ರಾಜ್ಯ ಸರಕಾರ ಹೇಳಿದರೂ, ನಮ್ಮ ಜಿಲ್ಲೆಯಲ್ಲಿ ಒಂದು ಗಂಟೆಗೆ ಮದ್ಯದಂಗಡಿ ಬಂದ್ ಆಗುತ್ತದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಹೀಗಾಗಿ ಬ್ಯೂಟಿ ಪಾರ್ವರ್, ಸೆಲೂನ್‌ಗಳನ್ನು ತೆರೆಯಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದರೂ, ಜಿಲ್ಲೆಯಲ್ಲಿ ಇನ್ನೂ ಒಂದು ವಾರ ಅವುಗಳನ್ನು ತೆರೆಯುವುದಿಲ್ಲ. ಅದೇ ರೀತಿ ಲಾಕ್‌ಡೌನ್ ಮುಗಿಯುವವರೆಗೆ ಜಿಲ್ಲೆಯಲ್ಲಿ ಯಾವುದೇ ಡೆಂಟಲ್ ಕ್ಲಿನಿಕ್ ತೆರೆಯಲ್ಲ ಎಂದವರು ಸ್ಪಷ್ಟ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News