×
Ad

ದ.ಕ.ಜಿಲ್ಲೆ: 7,119 ವಲಸೆ ಕಾರ್ಮಿಕರು ಸ್ವಗ್ರಾಮಕ್ಕೆ ರವಾನೆ

Update: 2020-05-03 21:37 IST

ಮಂಗಳೂರು ಮೇ 3: ಲಾಕ್‌ಡೌನ್ ಹಿನ್ನೆಲೆಯಲ್ಲಿ ತವರೂರಿಗೆ ಹೋಗಲಾಗದೆ ದ.ಕ.ಜಿಲ್ಲೆಯ ವಿವಿಧ ಕಡೆ ಆಶ್ರಯ ಪಡೆದಿದ್ದ ಎಲ್ಲಾ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತವು ಅವರ ಸ್ವಗ್ರಾಮಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಮಿಕರನ್ನು ಎ.24ರಿಂದ ಕೆಎಸ್ಸಾರ್ಟಿಸಿ ಬಸ್‌ಗಳ ಮೂಲಕ ಅವರವರ ಸ್ವಗ್ರಾಮಗಳಿಗೆ ಕಳುಹಿಸಿಕೊಡಲಾಗಿದೆ. ಕಟ್ಟಡ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿರುವ ಕೂಳೂರು, ಸುರತ್ಕಲ್, ಪಣಂಬೂರು, ಬೈಕಂಪಾಡಿ, ಎಯ್ಯೆಡಿ, ಮುಲ್ಕಿ, ಉಳ್ಳಾಲ, ಬಂದರು, ಹೊಯಿಗೆ ಬಝಾರ್ ಮತ್ತಿತರ ಪ್ರದೇಶಗಳು ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಂದ ಆಯಾ ಜಿಲ್ಲೆಗಳಿಗೆ ಕಟ್ಟಡ ಮತ್ತು ಕೃಷಿ ಕೆಲಸಗಳಿಗೆ ತೆರಳಲು ಇಚ್ಚಿಸಿದ 7,119 ಕಾರ್ಮಿಕರನ್ನು ಸರಕಾರಿ ಹಾಗೂ ಖಾಸಗಿ ಸಹಿತ 266 ಬಸ್‌ಗಳ ಮೂಲಕ ಅವರ ಸ್ವಗ್ರಾಮಗಳಿಗೆ ಕಳುಹಿಸಲಾಗಿದೆ. ಹೆಚ್ಚಿನ ಕಾರ್ಮಿಕರು ಬಾಗಲಕೋಟೆ, ಕೊಪ್ಪಳ, ಬಿಜಾಪುರ, ಯಾದಗಿರಿ, ಗದಗ, ರಾಯಚೂರು ಹಾಗೂ ಗುಲ್ಪರ್ಗ ಜಿಲ್ಲೆಗೆ ಸೇರಿದವರಾಗಿದ್ದಾರೆ.

ಬಸ್ಸುಗಳಲ್ಲಿ ಸಂಚರಿಸುವಾಗ ಸುರಕ್ಷಿತ ಅಂತರ ಕಾಪಾಡಿಕೊಂಡು ಆಸನದ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಪ್ರತೀ ಬಸ್‌ನಲ್ಲಿ 22-25 ಮಂದಿಯನ್ನಷ್ಟೇ ಕಳುಹಿಸಲಾಗಿತ್ತು. ಜಿಲ್ಲಾಡಳಿತದ ಜೊತೆಗೆ ಮಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆಯು ಈ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ವಿವಿಧ ಜಿಲ್ಲೆಗಳಿಗೆ ತೆರಳುವ ಮುನ್ನ ಎಲ್ಲಾ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗಿದೆ. ಕಾರ್ಮಿಕರಿಗೆ ಪ್ರಯಾಣದ ಸಮಯದಲ್ಲಿ ಅವಶ್ಯವಿರುವ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಸಹ ಒದಗಿಸಲಾಗಿತ್ತು.

ಕೋವಿಡ್ -19 ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಧಿಸಿದ ಕಾರಣ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಸತಿ ರಹಿತರಾಗಿದ್ದ ಕಾರ್ಮಿಕರನ್ನು ಹಾಗೂ ನಿರಾಶ್ರಿತರಿಗೆ ದ.ಕ.ಜಿಲ್ಲಾಡಳಿತದ ವತಿಯಿಂದ ತೆರೆಯಲಾಗಿದ್ದ ವಸತಿ ನಿಲಯಗಳಲ್ಲಿ ಮಾ.27ರಿಂದ ಆಶ್ರಯ ನೀಡಲಾಗಿತ್ತು. ಪುರಭವನ, ವಿವಿಧ ಸಭಾಂಗಣ, ಸರಕಾರಿ ವಿದ್ಯಾರ್ಥಿ ನಿಲಯ, ಹಾಸ್ಟೆಲ್‌ಗಳಲ್ಲಿ ಆಶ್ರಯ ನೀಡಲಾಗಿತ್ತು. ಇವರಿಗೆ ದಿನದ ಎಲ್ಲಾ ಹೊತ್ತು ಊಟೋಪಚಾರದ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿತ್ತು. ಅವರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News