ಕೊರೋನ: ಭಾರತದ ನಗರಗಳೇ ನಾಗರಿಕರ ಪಾಲಿಗೆ ಕಂಟಕ!
ಹೊಸದಿಲ್ಲಿ, ಮೇ 4: ಭಾರತದಲ್ಲಿ ಇದುವರೆಗೆ ವರದಿಯಾದ ಕೋವಿಡ್-19 ಪ್ರಕರಣಗಳ ಪೈಕಿ ಶೇಕಡ 75ರಷ್ಟು ಪ್ರಕರಣಗಳು ದೇಶದ 35 ದೊಡ್ಡ ನಗರಗಳಲ್ಲಿ ಕಂಡುಬಂದಿವೆ. ಅದರಲ್ಲೂ ಮೂರನೇ ಎರಡರಷ್ಟು ಪ್ರಕರಣಗಳು 13 ನಗರಗಳಲ್ಲಿ ಕಂಡುಬಂದಿವೆ ಎನ್ನುವುದು ಅಂಕಿಅಂಶಗಳ ವಿಶ್ಲೇಷಣೆಯಿಂದ ಸ್ಪಷ್ಟವಾಗಿದೆ. ಸಾವಿನ ಸಂಖ್ಯೆಗೂ ಇದು ಅನ್ವಯವಾಗುತ್ತದೆ.
ರವಿವಾರದವರೆಗೆ ದೇಶದಲ್ಲಿ ವರದಿಯಾದ 39,980 ಪ್ರಕರಣಗಳ ಪೈಕಿ 28,761 ಪ್ರಕರಣಗಳು 35 ದೊಡ್ಡ ನಗರಗಳಲ್ಲಿ ಕಂಡುಬಂದಿವೆ. ಅಂತೆಯೇ ಒಟ್ಟು 1,301 ಮಂದಿ ಮೃತಪಟ್ಟಿದ್ದು, ಈ ಪೈಕಿ 981 ಸಾವುಗಳು ಇದೇ ನಗರಗಳಲ್ಲಿ ಸಂಭವಿಸಿವೆ. ದಿಲ್ಲಿ ಎನ್‌ಸಿಆರ್ ಸೇರಿದಂತೆ 16 ರಾಜ್ಯಗಳಲ್ಲಿ ಈ 35 ಮಹಾನಗರಗಳಿವೆ.
ಒಟ್ಟು 13 ಮಹಾನಗರಗಳಲ್ಲಿ 500ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದ್ದು, ಈ ನಗರಗಳ ಒಟ್ಟು ಕೊಡುಗೆ 26,483 ಅಂದರೆ ದೇಶದ ಒಟ್ಟು ಪ್ರಕರಣಗಳ ಶೇಕಡ 66ರಷ್ಟು. ಕೊಲ್ಕತ್ತಾ ಹೊರತುಪಡಿಸಿ ಉಳಿದ ಮಹಾನಗರಗಳಲ್ಲಿ ಒಟ್ಟು 915 ಸಾವು ಸಂಭವಿಸಿದ್ದು, ಇದು ಒಟ್ಟು ಸಾವಿನ ಸಂಖ್ಯೆಯ ಶೇಕಡ 70ರಷ್ಟಾಗಿದೆ.
ಮುಂಬೈ, ದಿಲ್ಲಿ ಹಾಗೂ ಅಹ್ಮದಾಬಾದ್ ಅತ್ಯಂತ ಸೋಂಕುಪೀಡಿತ ನಗರಗಳಾಗಿದ್ದು, ಮುಂಬೈನಲ್ಲಿ 9,445, ದಿಲ್ಲಿಯಲ್ಲಿ 4,473 ಹಾಗೂ ಅಹ್ಮದಾಬಾದ್‌ನಲ್ಲಿ 3,610 ಪ್ರಕರಣಗಳು ಬೆಳಕಿಗೆ ಬಂದಿವೆ. ಅಂತೆಯೇ ಇಂಧೋರ್, ಚೆನ್ನೈ ಹಾಗೂ ಪುಣೆ ನಗರಗಳಲ್ಲಿ 1,000ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಉಳಿದಂತೆ ಏಳು ನಗರಗಳಲ್ಲಿ 500ಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿವೆ. ಅವುಗಳೆಂದರೆ ಜೈಪುರ (961), ಕೊಲ್ಕತ್ತಾ (851), ಸೂರತ್ ಹಾಗೂ ಹೈದರಾಬಾದ್ (ತಲಾ 600), ವಿಜಯವಾಡ, ಆಗ್ರಾ, ಹಾಗೂ ಭೋಪಾಲ್ (ತಲಾ 500). ಎಂಟು ದೊಡ್ಡ ನಗರಗಳಲ್ಲಿ 100ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದ್ದು, ಉಳಿದ 13 ನಗರಗಳ ಪೈಕಿ 12 ನಗರಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ದೇಶದ 35 ದೊಡ್ಡ ನಗರಗಳ ಪೈಕಿ ಜೆಮ್ಶೆಡ್‌ಪುರದಲ್ಲಿ ಮಾತ್ರ ಇದುವರೆಗೆ ಯಾವ ಪ್ರಕರಣವೂ ದಾಖಲಾಗಿಲ್ಲ.