ಲಾಕ್‌ಡೌನ್ ಸಡಿಲಿಕೆ: ದ.ಕ. ಜಿಲ್ಲೆಯ ಅಲ್ಲಲ್ಲಿ ತೆರೆದ ಅಂಗಡಿಗಳು, ಮದ್ಯದಂಗಡಿಗಳೆದುರು ಸರತಿ ಸಾಲು!

Update: 2020-05-04 06:43 GMT

ಮಂಗಳೂರು, ಮೇ 4: ಕೋವಿಡ್ 19 ನಿಯಂತ್ರಣದ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಸಂದರ್ಭ ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ಇಂದು ಲಾಕ್‌ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು (ಬಸ್ಸುಗಳನ್ನು ಹೊರತುಪಡಿಸಿ) ಸಾಲು ಸಾಲಾಗಿ ಸಂಚರಿಸಲಾರಂಭಿಸಿವೆ.

ಇದೇ ವೇಳೆ ನಗರದ ಹಲವೆಡೆ ಅಂಗಡಿ ಮುಂಗಟ್ಟುಗಳು ತೆರೆಯಲಾರಂಭಿಸಿವೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟದ ಅಂಗಡಿ ಮುಂಗಟ್ಟುಗಳು ಎಂದಿನಂತೆ ಇಂದೂ ಕಾರ್ಯಾಚರಿಸುತ್ತಿವೆ. ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಮುಚ್ಚಿದ್ದ ಕೆಲವು ಬಟ್ಟೆ, ಚಪ್ಪಲಿ, ಸ್ಟೇಶನರಿ, ಆಟಿಕೆಗಳು, ಸೈಕಲ್ ಶಾಪ್‌ಗಳು ಇಂದು ತೆರೆಯಲ್ಪಟ್ಟಿದ್ದು, ಅಲ್ಲಿನ ಸಿಬ್ಬಂದಿ ಶೇಖರಣೆಯಾಗಿರುವ ಧೂಳು ಹಾಗೂ ಜೇಡರ ಬಲೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.

ಮದ್ಯಪ್ರಿಯರ ನಿಯತ್ತು!

ನಗರದ ವಿವಿಧ ಕಡೆ ಜನರು ವಾಹನಗಳಲ್ಲಿ ಚಲಿಸುತ್ತಿದ್ದರೆ, ನಗರದ ಎಲ್ಲಾ ಮದ್ಯದ ಅಂಗಡಿಗಳೆದುರು ಕಿ.ಮೀ. ಉದ್ದದ ಸರತಿ ಸಾಲುಗಳು ಕಂಡುಬರುತ್ತಿವೆ. ಯುವಕರು ವಯೋವೃದ್ಧರು ಎನ್ನದೆ ಸರತಿ ಸಾಲಿನಲ್ಲಿ ಮದ್ಯ ಖರೀದಿಗಾಗಿ ಸೇರಿದ್ದಾರೆ. ವಿಶೇಷವೆಂದರೆ, ಬಿಸಿಲನ್ನೂ ಲೆಕ್ಕಿಸದೆ ಮದ್ಯಪ್ರಿಯರು ಸರತಿ ಸಾಲಿನಲ್ಲಿ ಸಂಯಮದ ಜತೆಗೆೆ ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿದ್ದಾರೆ. ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಬಹುತೇಕರಿಗೆ ಉದ್ಯೋಗ, ಕೂಲಿ ಕೆಲಸವಿಲ್ಲದೆ ಒದ್ದಾಡುವಂತಾಗಿದ್ದರೂ, ಇಂದು ಮದ್ಯದಂಗಡಿಗಳೆದುರು ಕಾಣಬರುತ್ತಿರುವ ಸರತಿ ಸಾಲು ಮಾತ್ರ ಅದ್ಯಾವುದೂ ಲೆಕ್ಕಕ್ಕಿಲ್ಲದಂತಾಗಿದೆ!

ಬೆಳ್ತಂಗಡಿಯ ಮದ್ಯದ ಅಂಗಡಿಯೆದುರು ಸರತಿ ಸಾಲು
ಬೆಳ್ತಂಗಡಿಯಲ್ಲಿ ಇಂದು ಬೆಳಗ್ಗೆ ಮದ್ಯದ ಅಂಗಡಿಗಳನ್ನು ತೆರೆಯುತ್ತಿದ್ದಂತೆಯೇ ಅವುಗಳ ಮುಂದೆ ಮದ್ಯಪ್ರಿಯರು ಸರತಿಯ ಸಾಲಿನಲ್ಲಿ ನಿಂತಿದ್ದಾರೆ. ಮದ್ಯದ ಅಂಗಡಿಗಳು ತೆರೆಯುವುದಕ್ಕಿಂತ ಮೊದಲೇ ಬೆಳಗ್ಗಿನ ಜಾವ ಮದ್ಯಪ್ರಿಯರು ಬಂದು ಸರತಿಯ ಸಾಲಿನಲ್ಲಿ ನಿಂತಿದ್ದರು. ಅಂಗಡಿಗಳು ತೆರೆಯುವ ವೇಳೆಗೆ ಬಹುತೇಕ ಅಂಗಡಿಗಳ ಮುಂದೆ ಸರತಿಯ ಸಾಲು ಉದ್ದವಾಗಿ ಬೆಳೆದಿದ್ದವು.

ಕೂಲಿಯನ್ನು ಅರಸುತ್ತಾ.....

ನಗರದ ಬಂದರು ಧಕ್ಕೆ ಸೇರಿದಂತೆ ವಿವಿಧ ಕಡೆ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ, ಲಾಕ್‌ಡೌನ್‌ನಿಂದಾಗಿ ನಗರದ ಪುರಭವನ ಸೇರಿದಂತೆ ವಿವಿಧ ಕಡೆ ಆಶ್ರಯ ಪಡೆದಿದ್ದ ನೂರಾರು ಸಂಖ್ಯೆಯ ಕೂಲಿ ಕಾರ್ಮಿಕರು (ಕೆಲವರು ಈಗಾಗಲೇ ತಮ್ಮ ಊರುಗಳಿಗೆ ಪ್ರಯಾಣಿಸಿದ್ದಾರೆ) ನಗರದ ಎನ್‌ಜಿಒ ಸಭಾಂಗಣದ ಆವರಣದಿಂದ ಸಾಲುಸಾಲಾಗಿ ಧಕ್ಕೆಯತ್ತ ಸಾಗುತ್ತಿರುವುದು ಕಂಡುಬಂತು. ಲಾಕ್‌ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ತಮಗೆ ಕೂಲಿ ಸಿಗಬಹುದೇನೋ ಎಂಬ ಆಸೆಯಿಂದಲೇ ಬಹುತೇಕ ಯುವಕರನ್ನೊಳಗೊಂಡ ಈ ಸಮೂಹ ಬಿರುಸಿನಿಂದ ಸಾಗುತ್ತಿರುವುದು ಕಂಡು ಬಂತು.

ಪ್ರಾರ್ಥನಾ ಮಂದಿರ, ಶಾಲಾ ಕಾಲೇಜುಗಳಲ್ಲಿ ಮೌನ...!


ಲಾಕ್‌ಡೌನ್ ಸಡಿಲಿಕೆಯಲ್ಲಿ ಮದ್ಯದಂಗಡಿಗಳಿಗೆ ವಿನಾಯಿತಿ ನೀಡಲಾಗಿದ್ದರೂ ಪ್ರಾರ್ಥನಾ ಮಂದಿರಗಳು, ಶಾಲಾ ಕಾಲೇಜುಗಳಿಗೆ ಅವಕಾಶ ನೀಡಲಾಗಿಲ್ಲ. ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಪ್ರಾರ್ಥನಾ ಮಂದಿರಗಳಿಗೆ ಸಾರ್ವಜನಿಕರಿಗೆ ಪ್ರವೇಶ ಒದಗಿಸಲಾಗದಿದ್ದರೂ ಸಾರ್ವಜನಿಕರು ಸಾಲು ಸಾಲಾಗಿ ಸೇರಿರುವ ಮದ್ಯದಂಗಡಿಗಳಿಗೆ ಇಷ್ಟು ಅರ್ಜೆಂಟಾಗಿ ಸರಕಾರ ಯಾಕೆ ಅವಕಾಶ ನೀಡಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಮೂಕ ಪ್ರೇಕ್ಷಕರಾದ ಪೊಲೀಸ್ ಸಿಬ್ಬಂದಿ!

ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ರಸ್ತೆಗಿಳಿಯುತ್ತಿದ್ದ ವಾಹನಗಳು, ಜನರನ್ನು ನಿಯಂತ್ರಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಇಂದು ಕೂಡಾ ಆಯಾಕಟ್ಟಿನ ಪ್ರದೇಶಗಳಲ್ಲಿ ಕರ್ತವ್ಯ ನಿರತರಾಗಿದ್ದಾರೆ. ನಿನ್ನೆಯವರೆಗೂ ಪಾಸ್ ಇದ್ದಲ್ಲಿ ಮಾತ್ರವೇ ಓಡಾಟಕ್ಕೆ ಅನುಮತಿ ನೀಡುತ್ತಿದ್ದ ಪೊಲೀಸರೆದುರು ಇಂದು ಜನರು ಯಾವುದೇ ನಿರಾರಂತಕವಾಗಿ ತಮ್ಮ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ.

ಸಾಲುಗಟ್ಟಲೆ ವಾಹನಗಳ ಸಂಚಾರವನ್ನು ನೋಡುತ್ತಾ ಪೊಲೀಸ್ ಸಿಬ್ಬಂದಿ ಮೂಕಪ್ರೇಕ್ಷಕರಂತಾಗಿದ್ದಾರೆ. ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಬಹುತೇಕ ಕಡೆಗಳಲ್ಲಿ ಅವುಗಳನ್ನು ತೆರವುಗೊಳಿಸಲಾಗಿಲ್ಲ. ವಾಹನಗಳು ಲಾಕ್‌ಡೌನ್ ಸಂದರ್ಭದಲ್ಲಿ ಸಂಚರಿಸುತ್ತಿದ್ದ ಮಾದರಿಯಲ್ಲೇ ನಗರದ ರಸ್ತೆಗಳಲ್ಲಿ ಸಂಚಾರ ನಡೆಸುತ್ತಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News