×
Ad

ಉಡುಪಿ: ಮದ್ಯ ಖರೀದಿಗೆ ಮುಗಿಬಿದ್ದ ಪಾನಪ್ರಿಯರು!

Update: 2020-05-04 10:56 IST

ಉಡುಪಿ, ಮೇ 5: ಉಡುಪಿ ಜಿಲ್ಲಾದ್ಯಂತ ಇಂದಿನಿಂದ ಮದ್ಯ ಮಾರಾಟ ಆರಂಭವಾಗಿದ್ದು, ಪಾನಪ್ರಿಯರು ಮದ್ಯ ಮಾರಾಟ ಮಳಿಗೆಗಳ ಮುಂದೆ ಉರಿಬಿಸಿಲನಲ್ಲೂ ಮೀಟರ್‌ಗಟ್ಟಲೆ ದೂರದವರೆಗೆ ಸಾಲುಗಟ್ಟಿ ನಿಂತು ಮದ್ಯ ಖರೀದಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 14 ಎಂಎಸ್‌ಐಎಲ್ ಮಳಿಗೆ ಹಾಗೂ 89 ವೈನ್‌ಶಾಪ್‌ಗಳು ಸೇರಿದಂತೆ ಒಟ್ಟು 103 ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಮದ್ಯ ಮಾರಾಟ ಪ್ರಕ್ರಿಯೆ ಆರಂಭಗೊಂಡಿದ್ದು, ಪಾನಪ್ರಿಯರು ಬೆಳಗಿನ ಜಾವವೇ ಮದ್ಯ ಮಾರಾಟ ಮಳಿಗೆಗಳ ಮುಂದೆ ಜಮಾಯಿಸಿರುವುದು ಕಂಡುಬಂದಿದೆ.

ಜನರ ಒತ್ತಡಕ್ಕೆ ಮಣಿದು ಕೆಲವು ಮಳಿಗೆಗಳನ್ನು ಸಮಯಕ್ಕಿಂತ ಮೊದಲೇ ತೆರೆದು ಮದ್ಯ ಮಾರಾಟ ಆರಂಭಿಸಿವೆ. ಎಲ್ಲ ಮಳಿಗೆಗಳಲ್ಲಿ ವ್ಯಾಪಾರ ಬಿರುಸಿನಿಂದ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆಯ ವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ನಗರದ ಕೆಲವು ವೈನ್‌ಶಾಪ್‌ಗಳಲ್ಲಿ ಜನ ಒಟ್ಟಾಗಿ ಸೇರಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಉಡುಪಿ ನಗರ ಠಾಣೆ ಪೊಲೀಸರು ಲಾಠಿ ಹಿಡಿದು ದೂರ ನಿಲ್ಲಿಸಿ, ಸುರಕ್ಷತಾ ಅಂತರ ಕಾಪಾಡುವಂತೆ ಸೂಚಿಸಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು, ಮುನ್ನೆಚ್ಚರಿಕೆ ಕ್ರಮವಾಗಿ ಉಡುಪಿ ನಗರದಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಅದೇರೀತಿ ತಿಂಗಳ ನಂತರ ಮದ್ಯ ಸೇವಿಸುತ್ತಿರುವ ಜನರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುವುದರಿಂದ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ತುರ್ತು ಸೇವೆಗಾಗಿ ಆ್ಯಂಬುಲೆನ್ಸ್ ನಿಯೋಜಿಸಲಾಗಿದೆ.

ಪಡುಬಿದ್ರೆ, ಕಾಪು, ಕಟಪಾಡಿ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಕಾರ್ಕಳ, ಹಿರಿಯಡ್ಕ, ಮಲ್ಪೆ, ಉಡುಪಿಯ ಕಲ್ಸಂಕ, ಬನ್ನಂಜೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿರುವ ಮದ್ಯ ಮಾರಾಟ ಮಳಿಗೆಗಳಲ್ಲಿ ಜನ ಉರಿ ಬಿಸಿಲಿನಲ್ಲೂ ಸಾಲುಗಟ್ಟಿ ನಿಂತು ಮದ್ಯ ಖರೀದಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.

ಮದ್ಯ ಮಾರಾಟ ಆರಂಭವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಕ್ರಮಗಳು ಮತ್ತು ನಿಯಮ ಉಲ್ಲಂಘನೆಯಾಗದಂತೆ ತಡೆಯುವ ಉದ್ದೇಶದಿಂದ ರಚಿಸಲಾದ ಅಬಕಾರಿ ಇಲಾಖೆ ಏಳು ತಂಡಗಳು ಜಿಲ್ಲೆಯಾದ್ಯಂತ ಗಸ್ತು ತಿರುಗವ ಕಾರ್ಯ ನಡೆಸುತ್ತಿದೆ. ಹಲವು ವೈನ್‌ಶಾಪ್‌ಗಳಿಗೆ ಭೇಟಿ ನೀಡಿರುವ ತಂಡ ಪರಿಶೀಲನೆ ನಡೆಸುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News