ಈಗಿನ ಪರಿಸ್ಥಿತಿ ಅಪಾಯಕಾರಿ ಪಿಚ್‌ನಲ್ಲಿ ಟೆಸ್ಟ್ ಪಂದ್ಯದಂತಿದೆ: ಸೌರವ್ ಗಂಗುಲಿ

Update: 2020-05-04 07:17 GMT

ಹೊಸದಿಲ್ಲಿ, ಮೇ 3: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಉಂಟಾಗಿರುವ ವಿನಾಶದ ಬಗ್ಗೆ ತೀವ್ರ ದುಃಖ ಹಾಗೂ ಭಯಭೀತರಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ, ಪ್ರಸ್ತುತ ಅಭೂತಪೂರ್ವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಅಪಾಯಕಾರಿ ಪಿಚ್‌ನಲ್ಲಿ ಟೆಸ್ಟ್ ಪಂದ್ಯ ಆಡುವುದಕ್ಕೆ ಹೋಲಿಸಿದ್ದಾರೆ.

‘‘ಈಗಿನ ಪರಿಸ್ಥಿತಿಯು ತುಂಬಾ ಅಪಾಯಕಾರಿ ಪಿಚ್‌ನಲ್ಲಿ ಟೆಸ್ಟ್ ಪಂದ್ಯ ಆಡಿದಂತಿದೆ. ಚೆಂಡು ಸ್ವಿಂಗ್ ಹಾಗೂ ಸ್ಪಿನ್ ಆಗುತ್ತಿದೆ. ಬ್ಯಾಟ್ಸ್‌ಮನ್‌ಹೆಚ್ಚು ತಪ್ಪು ಮಾಡುವಂತಿಲ್ಲ. ಬ್ಯಾಟ್ಸ್‌ಮನ್ ರನ್ ಗಳಿಸುವ ಜೊತೆಗೆ ವಿಕೆಟ್‌ನ್ನು ಉಳಿಸಿಕೊಳ್ಳಬೇಕು. ಕಡಿಮೆ ತಪ್ಪು ಮಾಡುವ ಮೂಲಕ ಈ ಟೆಸ್ಟ್ ಪಂದ್ಯದಲ್ಲಿ ಜಯಶಾಲಿಯಾಗಬೇಕಾಗಿದೆ’’ಎಂದು ಫಿವರ್ ನೆಟ್‌ವರ್ಕ್‌ನ ‘100 ಅವರ್ಸ್ 100 ಸ್ಟಾರ್ಸ್’ ಕಾರ್ಯಕ್ರಮದಲ್ಲಿ ಗಂಗುಲಿ ಹೇಳಿದ್ದಾರೆ.

 ಇದು ಅತ್ಯಂತ ಕಷ್ಟಕರ ಪಂದ್ಯ. ಎಲ್ಲರೂ ಒಟ್ಟಿಗೆ ಸೇರಿ ಕೊರೋನ ವಿರುದ್ಧದ ಪಂದ್ಯವನ್ನು ಗೆಲ್ಲುವ ವಿಶ್ವಾಸ ನಮಗಿದೆ.ಈಗಿನ ಪರಿಸ್ಥಿತಿ ನೋಡಿ ತುಂಬಾ ಬೇಸರವಾಗುತ್ತಿದೆ. ಹೊರಗೆ ಸಾಕಷ್ಟು ಜನರು ಸಮಸ್ಯೆ ಗೀಡಾಗಿದ್ದಾರೆ. ಈ ಸಾಂಕ್ರಾಮಿಕ ಕಾಯಿಲೆಗೆ ಹೇಗೆ ಕಡಿವಾಣಹಾಕುವುದು ಎಂಬ ಬಗ್ಗೆ ನಾವೀಗಲೂ ಪರದಾಡುತ್ತಿದ್ದೇವೆ ಎಂದರು.

‘‘ಇಡೀ ವಿಶ್ವದ ಪರಿಸ್ಥಿತಿ ನನಗೆ ನಿಜಕ್ಕೂ ಚಿಂತೆಗೀಡು ಮಾಡಿದೆ. ಇದು ಹೇಗೆ, ಎಲ್ಲಿ ಹಾಗೂ ಯಾವಾಗ ಬರುತ್ತದೆ ಎಂದು ನಮಗೆ ಗೊತ್ತಿಲ್ಲ. ಇದಕ್ಕೆ ನಾವೆಲ್ಲರೂ ತಯಾರಿ ನಡೆಸಿಲ್ಲ. ಕಾಯಿಲೆಯಿಂದ ಜನರು ಸಾಕಷ್ಟು ಬಳಲುತ್ತಿದ್ದಾರೆ. ಹಲವಾರು ಸಾವುಗಳು ಸಂಭವಿಸಿವೆ. ಈಗಿನ ಪರಿಸ್ಥಿತಿ ನನಗೆ ದುಃಖದ ಜೊತೆಗೆ ಭಯವನ್ನುಂಟು ಮಾಡಿದೆ. ದಿನಸಿಗಳು, ಆಹಾರ ತಲುಪಿಸಲು ಜನರು ನನ್ನ ಮನೆಗೆ ಬರುತ್ತಾರೆ. ನನಗೆ ಸ್ವಲ್ಪ ಭಯವಿದೆ. ಇದೊಂದು ಮಿಶ್ರ ಅನುಭವ. ಆದಷ್ಟು ಬೇಗನೆ ಇದು ಕೊನೆಯಾಗಲಿ ಎಂದು ಬಯಸುವೆ’’ಎಂದು ಗಂಗುಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News