ಮೇ ಅಂತ್ಯಕ್ಕೆ ರಾಷ್ಟ್ರೀಯ ಶಿಬಿರಗಳ ಪುನರಾರಂಭಕ್ಕೆ ಚಿಂತನೆ: ಕಿರಣ್ ರಿಜಿಜು

Update: 2020-05-04 08:07 GMT

ಹೊಸದಿಲ್ಲಿ, ಮೇ 3: ಒಲಿಂಪಿಕ್ಸ್‌ನಲ್ಲಿಭಾಗವಹಿಸಲಿರುವ ಅಥ್ಲೀಟ್‌ಗಳಿಗೆ ರಾಷ್ಟ್ರೀಯ ಶಿಬಿರಗಳನ್ನು ಈ ತಿಂಗಳ ಅಂತ್ಯಕ್ಕೆ ಪುನರಾರಂಭಿಸುವ ಕುರಿತು ಯೋಜನೆ ರೂಪಿಸಲಾಗಿದೆ. ಇತರ ಕ್ರೀಡಾಳುಗಳು ಸೆಪ್ಟಂಬರ್ ಅಂತ್ಯದ ತನಕ ಕಾಯಬೇಕಾಗುತ್ತದೆ ಎಂದು ರವಿವಾರ ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಕೊರೋನ ವೈರಸ್‌ನಿಂದಾಗಿ ದೇಶವ್ಯಾಪಿ ಲಾಕ್‌ಡೌನ್‌ನ್ನು ಮೇ 17ರ ತನಕ ವಿಸ್ತರಿಸಲಾಗಿದೆ. ಹೀಗಾಗಿ ತನ್ನ ಸಚಿವಾಲಯ ಭಾರತ ಕ್ರೀಡಾ ಪ್ರಾಧಿಕಾರ(ಸಾಯ್)ಕೇಂದ್ರಗಳಲ್ಲಿ ತರಬೇತಿ ಶಿಬಿರಗಳನ್ನು ಪುನರಾರಂಭಿಸುವ ಪ್ರಕ್ರಿಯೆ ವಿಳಂಬ ಮಾಡಬೇಕಾಗಿ ಬಂದಿದೆ ಎಂದು ರಿಜಿಜು ಹೇಳಿದ್ದಾರೆ.

‘‘ಹಂತಗಳ ಆಧಾರದಲ್ಲಿ ಶಿಬಿರಗಳು ಆರಂಭವಾಗಲಿವೆ. ಮೊದಲಿಗೆ ಪಟಿಯಾಲದ ಎನ್‌ಐಎಎಸ್ ಹಾಗೂ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ತರಬೇತಿ ಆರಂಭಿಸಲಿದ್ದೇವೆ. ಈ ತಿಂಗಳಾಂತ್ಯದಲ್ಲಿ ಬೆಂಗಳೂರು ಹಾಗೂ ಪಟಿಯಾಲದಲ್ಲಿ ತರಬೇತಿ ಶಿಬಿರ ಆರಂಭವಾಗುವ ನಿರೀಕ್ಷೆಯಿದೆ’’ ಎಂದು ರಿಜಿಜು ಹೇಳಿದ್ದಾರೆ.

‘‘ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಅಥವಾ ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಲ್ಲಿ ಆಡಲಿರುವ ಕ್ರೀಡೆಗಳಿಗೆ ಶಿಬಿರ ಇರುತ್ತದೆ. ಮೇ 3ರಿಂದ ಸಾಯ್ ಕೇಂದ್ರಗಳಲ್ಲಿ ಅಥ್ಲೀಟ್‌ಗಳ ತರಬೇತಿ ಆರಂಭಿಸಲು ನಾವು ಯೋಚಿಸಿದ್ದೆವು. ಆದರೆ, ಲಾಕ್‌ಡೌನ್ ವಿಸ್ತರಿಸಿರುವ ಕಾರಣ ಕೈ ಕಟ್ಟಿಹಾಕಿದಂತಾಗಿದೆ. ಲಾಕ್‌ಡೌನ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಬರುತ್ತದೆ. ನಮ್ಮದು ಅಗತ್ಯ ಸೇವೆಗಳ ಅಡಿಗೆ ಬರುವುದಿಲ್ಲ’’ ಎಂದು ರಿಜಿಜು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News